– ಸಂಗಮೇಶ ಮುಶಿಗೇರಿ
ಕೊಪ್ಪಳ (ಕುಷ್ಟಗಿ) : ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧ ಶರಣಪ್ಪ ಪ್ಯಾಟೆಪ್ಪ ಸೂಡಿ ಅವರ ಕಂಚಿನ ಪುತ್ತಳಿಯನ್ನು ದಿನಾಂಕ 17-11-2021 ರಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಗುರು-ಹಿರಿಯರು ಹಾಗೂ ಪೂರ್ಣ ಕುಂಬ ಹೊತ್ತ ಮಹಿಳೆಯರು ಸೇರಿ ವೈಭವದ ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಗ್ರಾಮದಲ್ಲಿ ಸ್ವಾಗತಿಸಲಾಗಿತು..!
ಹಿರೇಮನ್ನಾಪೂರ ಗ್ರಾಮದಲ್ಲಿ ಯೋಧನ ಪುತ್ತಳಿ ಸ್ಥಾಪಿಸುವ ಉದ್ದೇಶದಿಂದ ಊರಿನ ಹಿರಿಯರು ಹುನಗುಂದ ತಾಲೂಕಿನ ತುರುಗಮರಿ ಗ್ರಾಮದಲ್ಲಿ ಹುತಾತ್ಮ ಯೋಧನ ಕಂಚಿನ ಪುತ್ತಳಿ ಕೆತ್ತನೆಗೆ ನೀಡಿದ್ದರು. ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡ ಹಿನ್ನೆಲೆ ಇಂದು ಯೋಧನ ಪತ್ತಳಿಯನ್ನು ಗ್ರಾಮಕ್ಕೆ ತರಲಾಯಿತು.
ಪುತ್ತಳಿ ಪುರ ಪ್ರವೇಶ ಮಾಡುತ್ತಿದ್ದಂತೆ ಗ್ರಾಮದ ಶ್ರೀ ಗವಿಸಿದ್ದೇಶ್ವರ ಶಾಲಾ ಆವರಣದಲ್ಲಿ ಸ್ವಾಗತಿಸಿಕೊಳ್ಳಲಾಯಿತು. ನಂತರ ಶಾಲಾ ಆವರಣದಿಂದ ಆರಂಭಗೊಂಡ ಪುತ್ತಳಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಎಂ.ಗುಡದೂರು ರಸ್ತೆ ಪಕ್ಕದಲ್ಲಿರುವ ಹುತಾತ್ಮ ಯೋಧ ಶರಣಪ್ಪ ಪ್ಯಾಟೆಪ್ಪ ಸೂಡಿ ಅವರ ಕತೃಗದ್ದುಗೆಗೆ ತಲುಪಿಸಲಾಯಿತು.
ಬಳಿಕ ಆಗಮಿಸಿದ ಕೊಪ್ಪಳ ಗವಿಮಠದ ಮಹಾ ಸ್ವಾಮಿಗಳು ಹಾಗೂ ಚಿಕ್ಕೇನಕೊಪ್ಪದ ಶರಣರನ್ನು ಸ್ವಾಗತಿಸಿದ ಗ್ರಾಮಸ್ಥರು ಇಬ್ಬರು ಶ್ರೀಗಳ ಪಾದ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿ/ನಿಯರು, ಊರಿನ ಪ್ರಮುಖರು, ಮಹಿಳೆಯರು, ಮಕ್ಕಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ 19-11-2021 ರಂದು ದಿನ ಪುತ್ತಳಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದೆ..!