ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಕರಾಟೆ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿಜಯಶಾಲಿಗಳಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೂವರು ಕರಾಟೆ ಪ್ರತಿಭೆಗಳನ್ನು ಸೋಮವಾರ ರಾತ್ರಿ 8 ಗಂಟೆಗೆ ಪಟ್ಟಣದಲ್ಲಿ ನಾಗರಿಕರು ಗೌರವಿಸಿ ಸಂಭ್ರಮಿಸಿದರು.
ತಾಲೂಕಿನ ವೆಂಕಟಾಪೂರ ಗ್ರಾಮದ ತಳುವಗೇರಾ ಆದರ್ಶ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಗುರುರಾಜ ಜಯರಾಮ ಪೂಜಾರಿ ಹಾಗೂ ಬಿಜಕಲ್ ಗ್ರಾಮದ ಮಂಜುನಾಥ ಹಿರೇಯಮನಪ್ಪ ವಡ್ಡರ ಹಾಗೂ ಕೆ.ಬೋದೂರು ಗ್ರಾಮದ ಆಂಜನೇಯ ಯಂಕಪ್ಪ ವಡ್ಡರ ಬೆಂಗಳೂರಿನಲ್ಲಿ ಜರುಗಿದ ಕರಾಟೆ ಸ್ಕೈ ಮಾರ್ಷಲ್ ಆರ್ಟ್ಸ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜಯಶಾಲಿಗಳಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಜಸ್ಥಾನದ ಜೈಪುರದಲ್ಲಿ ಜನೇವರಿ 4ರಿಂದ 6ರ ವರೆಗೆ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಷ್ಟಗಿ ತಾಲೂಕಿನ ಹಾಗೂ ಕರ್ನಾಟಕದ ಕೀರ್ತಿ ತಂದ ಈ ಮೂವರು ಕ್ರೀಡಾಪಟುಗಳ ಸಾಧನೆಗೆ ಕುಷ್ಟಗಿ ತಾಲೂಕಿನ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.