ಕುಷ್ಟಗಿ | ಮೊಬೈಲ್ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು, ಇಬ್ಬರ ಬಂಧನ

ಸುದ್ದಿ ಸಮರ್ಪಣ |

ಕಳೆದ ವರ್ಷ ಜುಲೈ 24 ರಂದು ಕುಷ್ಟಗಿ ಪಟ್ಟಣದ ಮಾರುತಿ ವೃತ್ತದ ಬಳಿಯ ಕೋರಾ ಎಲೆಕ್ಟ್ರಾನಿಕ್, ಮೊಬೈಲ್ ಅಂಗಡಿಯೊಂದರ ಶೆಟ್ರಸ್ ಬೀಗ ಮುರಿದು ಬೆಲೆ ಬಾಳುವ ಮೊಬೈಲ್ ದೋಚಿದ್ದ ಕಳ್ಳರನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಮೊಬೈಲ್ ಅಂಗಡಿ ಮಾಲೀಕ ಅವಿನಾಶ ಕೊರಾ ಎಂಬುವರು ತಮ್ಮ ಅಂಗಡಿಯಲ್ಲಿನ 15,37,300/- ರೂ ಬೆಲೆ ಬಾಳುವ ವಿವಿಧ ಕಂಪನಿಯ 81 ಮೊಬೈಲ್‌ಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆಯ ಕುರಿತು ದೂರು ನೀಡಿದ್ದರು.

ದೂರಿನನ್ವಯ ಕೊಪ್ಪಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಗಂಗಾವತಿ ಡಿವೈಎಸ್ಪಿ ಅವರ ನಿರ್ದೇಶನ ಮೇರೆಗೆ ಕುಷ್ಟಗಿ ಸಿಪಿಐ ಹಾಗೂ ಪಿಎಸ್ ಮತ್ತು ಪೊಲೀಸ್ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ಕಳ್ಳತನ ಪ್ರಕರಣ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿದ್ದರು.

ಕಳ್ಳರ ಪತ್ತೆಗೆ ಮಾಹಿತಿ ಸಂಗ್ರಹಿಸಿದ ಪೊಲೀಸ್ ತಂಡ ಬೆಂಗಳೂರಿನಲ್ಲಿದ್ದ 33 ವಯಸ್ಸಿನ ಸಲ್ಮಾನ್ ಮನ್ಸೂರ ತಂದೆ ಬಸೀರ ಅಹ್ಮದ, 32 ವಯಸ್ಸಿನ ಸೈಯದ ನದೀಮ್ ತಂದೆ ಸೈಯದ ಆಸ್ಲಾಂ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆಪಾದಿತರಿಂದ 5,28,750/- ರೂ ಬೆಲೆ ಬಾಳುವ ವಿವಿಧ ಕಂಪನಿಯ 27 ಮೋಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಪಾದಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದು, ಪರಾರಿಯಾಗಿರುವ ಮತ್ತೋರ್ವ ಅಪಾದಿತ ಹಾಗೂ ಉಳಿದ ಮೋಬೈಲ್‌ಗಳ ಪತ್ತೆ ಕಾರ್ಯವನ್ನು ಪೊಲೀಸ್ ಅಧಿಕಾರಿಗಳ ತಂಡ ಮುಂದುವರೆಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಣಾಕ್ಷತೆಯಿಂದ ಮಾಹಿತಿ ಸಂಗ್ರಹಿಸಿ ಆರೋಪಿತರನ್ನ ಪತ್ತೆ ಮಾಡಿ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಆರಸಿದ್ರಿ ಅವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.