– ಶರಣಪ್ಪ ಕುಂಬಾರ
ಕೊಪ್ಪಳ : ದರ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಒಂದು ಕ್ವಿಂಟಲ್ ಈರುಳ್ಳಿಗೆ 50 ರೂಪಾಯಿಗಳ ದರದಲ್ಲಿ ಮಾರಾಟಮಾಡಿದ ರೈತರು ಕಂಗಾಲಾಗಿದ್ದಾರೆ..!
ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಕೃಷ್ಣ , ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರದ ರೈತರು ಈ ವರ್ಷ ಈರುಳ್ಳಿಯನ್ನು (ಉಳ್ಳಾಗಡ್ಡಿ) ಬಂಪರ್ ಆಗಿ ಬೆಳೆದಿದ್ದಾರೆ. ಆದರೆ, ಪಡೆದ ಇಳುವರಿಗೆ ತಕ್ಕಂತೆ ದರ ಲಭ್ಯವಾಗದ ಹಿನ್ನೆಲೆಯಲ್ಲಿ ರೈತರು ಕೈಚೆಲ್ಲಿ ಕುಳಿತಿದ್ದಾರೆ. ಜಮೀನು ಹದ ಸೇರಿದಂತೆ, ಬೀಜ, ಗೊಬ್ಬರ, ಕ್ರಿಮಿನಾಶಕ, ಕಳೆ, ಕಟಾವು ಇತ್ಯಾದಿಗಳ ಕರ್ಚಿಗೆ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿರುವ ರೈತರಿಗೆ ಈರುಳ್ಳಿ ತುಂಬಲು ಖರೀದಿಸಿದ ಖಾಲಿ ಚೀಲದ ಕರ್ಚು ಬಾರದಂತಾಗಿದೆ. ಈ ವರ್ಷ ಈರುಳ್ಳಿ ಬೆಳೆಯನ್ನು ಯಾಕಾದರೂ ಬೆಳೆದೆವು ಎಂಬ ಕೊರಗು ರೈತರನ್ನು ಕಾಡಲಾರಂಭಿಸಿದೆ. ಎಕರೆಗೆ ಲಕ್ಷಾಂತರ ರೂಪಾಯಿಗಳ ನಿವ್ವಳ ಆದಾಯ ನಿರೀಕ್ಷೆಯಲ್ಲಿದ್ದವರಿಗೆ ಈರುಳ್ಳಿ ಕಣ್ಣೀರು ಹಾಕಿಸಿದೆ ಎಂದು ಪಕ್ಕದ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಪ್ರಗತಿ ಪರ ರೈತ ಕುಮಾರಯ್ಯ ಬಸಯ್ಯ ಹೆಬ್ಬಳ್ಳಿ ನೊಂದು ‘ಕೃಷಿ ಪ್ರಿಯ’ ಪತ್ರಿಕೆ ಮುಂದೆ ತಮ್ಮ ಅಳಲು ಹಂಚಿಕೊಂಡರು.
ಕೊಳೆಯಲು ಬಿಟ್ಟ ರೈತರು : ಈರುಳ್ಳಿ ದರ ಕುಸಿತದಿಂದ ಬೇಸತ್ತು ಹೋಗಿರುವ ರೈತರು ಈರುಳ್ಳಿ ಕೀಳಲಾರದೆ, ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿದ್ದಾರೆ. ಈರುಳ್ಳಿ ಕೀಳುವ ಕೂಲಿ ಅಲ್ಲದೆ, ಅದನ್ನು ಕಟಾವು ಮಾಡಿದ ಕರ್ಚು ಕೂಡಾ ಮೈಮೇಲೆ ಆಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟವಾಗಿದೆ.
ಸರಕಾರ ಕೂಡಲೇ ನೆರವಿಗೆ ಬರಲೇಬೇಕು..! : ಸಾಲ-ಸೂಲ ಮಾಡಿಕೊಂಡು, ಜಮೀನು ಹದದಿಂದ ಹಿಡಿದು, ಕಟಾವುವರೆಗೆ ಈರುಳ್ಳಿ ಬೆಳೆಗೆ ಕರ್ಚು ಮಾಡಿದ ನಮ್ಮ ಅನ್ನದಾತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಮುಂದೆ ಬರಬೇಕಾಗಿದೆ. ಕಳಪೆ ಕಾಮಗಾರಿಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಸುರಿದು ಹಾಳು ಮಾಡುವ ಸರಕಾರಗಳು ದಯನೀಯ ಸ್ಥಿತಿಯಲ್ಲಿರುವ ನಮ್ಮ ಕೃಷಿಕರ ಪಾಲಿಗೆ ಮುಂದೆ ಬಂದು ಕನಿಷ್ಟ ಪಕ್ಷವಾದರೂ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆಯಾದರೂ ಘೋಷಿಸುವ ಅವಶ್ಯಕತೆ ಖಂಡಿತ ಇದೆ. ಅಥವಾ ಎಕರೆಗೆ ಇಂತಿಷ್ಟು ಪರಿಹಾರ ರೂಪದಲ್ಲಿ ನೆರವಿಗೆ ಮುಂದಾಗಲೇಬೇಕು ಎಂಬ ಈರುಳ್ಳಿ ಬೆಳೆಗಾರರ ಕೂಗು ಮಾತ್ರ ಮುಗಿಲು ಮುಟ್ಟಿದೆ..!!