– ಖ್ಯಾತ ನಾಟಿ ವೈದ್ಯ ಹನುಮಗೌಡ ನಂದಿಹಾಳ (65) ಇನ್ನಿಲ್ಲ..!

 

 

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ನಿಂಗಲಬಂಡಿ ಗ್ರಾಮದ ಖ್ಯಾತ ನಾಟಿ ವೈದ್ಯ ಹನಮಗೌಡ ಬಸನಗೌಡ ನಂದಿಹಾಳ (65) ಅವರು ಶನಿವಾರ ಅನಾರೋಗ್ಯ ದಿಂದ ನಿಧನರಾಗಿದ್ದಾರೆ.
ವಾರದಲ್ಲಿ ಎರಡು ದಿನ ಗುರುವಾರ ಮತ್ತು ಭಾನುವಾರ ಅವರು ನಾಟಿ ಔಷಧ ನೀಡುತ್ತಿದ್ದರು. ಸ್ವತಃ ಕಾಡಿಗೆ ತೆರಳಿ ಗಿಡಮೂಲಿಕೆ ತಂದು ಔಷಧ ತಯಾರಿಸುತ್ತಿದ್ದರು. ಕಾಮಾಲೆ, ಮಧುಮೇಹ, ಚರ್ಮರೋಗ, ಅಲರ್ಜಿ, ಗರ್ಭಕೋಶ ಸಮಸ್ಯೆ ಸೇರಿದಂತೆ ಇನ್ನೂ ಮುಂತಾದ ಕಾಯಿಲೆಗಳಿಗೆ ಔಷಧ ನೀಡುತ್ತಿದ್ದರು. ನಾನಾ ರೋಗಕ್ಕೆ ಔಷಧ ಪಡೆಯಲು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ರೋಗಿಗಳು ಬರುತ್ತಿದ್ದರು. ಆ ಪೈಕಿ ಸಾಕಷ್ಟು ಮಂದಿ ಗುಣಮುಖರಾಗಿರುವ ಮಾಹಿತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಅವರ ಬಳಿ ಔಷಧಿಗಾಗಿ ಅಪಾರ ಸಂಖ್ಯೆಯ ರೋಗಿಗಳು ಬರುತ್ತಿದ್ದರು. ಆರಂಭದಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ ನಾಟಿ ಔಷಧ ನೀಡುತ್ತಿದ್ದರು. ಕ್ರಮೇಣ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ನಾಟಿ ಔಷಧ ವಿತರಿಸಲು ಆರಂಭಿಸಿದ್ದರು. ಹನಮಗೌಡ ನಂದಿಹಾಳ ಅವರ ಸೇವೆಯನ್ನು ಗುರುತಿಸಿ ವಿವಿಧ ಸಂಘ-ಸಂಸ್ಥೆಗಳು ಅವರನ್ನು ಗೌರವಿಸ ಸನ್ಮಾನಿಸಬೇಕೆಂದರೆ ಅವರು ಅದು ಯಾವುದು ಸನ್ಮಾನ ಪುರಸ್ಕಾರ ಬೇಡ ಎಂದು ವಿನಯವಾಗಿ ತಿರಸ್ಕರಿಸಿದ್ದರು ಎಂದು ಅವರ ಒಡನಾಡಿಗಳ ಮನದ ಮಾತಾಗಿದೆ.
ಎಲೆಮರೆಯ ಕಾಯಂತೆ ತಮ್ಮ ನಿಸ್ವಾರ್ಥ ಉಚಿತ ಸೇವೆಯಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಹನಮಗೌಡ ನಂದಿಹಾಳ ಅವರೂ ರೋಗಿಗಳಿಗೆ ಔಷಧ ಕೊಡುವಾಗ ಮನದಲ್ಲಿ ಪ್ರಾರ್ಥಿಸಿ ಔಷಧ ಕೊಡುತ್ತಿದ್ದರು. ಅವರು ಪತ್ನಿ ಹಾಗೂ ಮೂರು ಜನ ಪುತ್ರರು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ 12:30 ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..!!

 

(ವರದಿ : ಭೀಮನಗೌಡ ಪಾಟೀಲ)