– ಸಂಗಮೇಶ ಮುಶಿಗೇರಿ
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಭಾಗದಲ್ಲಿ ಅಕಾಲಿಕ ಮತ್ತು ತುಂತುರು ಮಳೆಯಿಂದಾಗಿ ದೀರ್ಘಕಾಲದ ಬೆಳೆಗಳು ಹಾಳಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಒತ್ತಾಯಿಸಿದ್ದಾರೆ..!
ತಮ್ಮ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಸಕಾಲಿಕ ಮಳೆಯಾಗಿದೆ. ಕೆಲವು ಬೆಳೆಗಳು ಉತ್ತಮವಾಗಿ ಬಂದಿವೆ. ದೀರ್ಘಾವಧಿ ಬೆಳೆಗಳು ಅಕಾಲಿಕ ಮಳೆ, ತುಂತುರು ಮಳೆಯಿಂದ ಹಾಳಾಗಿದೆ. ಮಳೆಗಾಲವಲ್ಲದ ಸಂದರ್ಭದಲ್ಲಿ ಮಳೆ ಹೀಗೆ ಮಳೆ ಮುಂದುವರೆದರೆ ನೂರಕ್ಕೆ ನೂರರಷ್ಟು ತೊಗರಿ ಬೆಳೆ ಸೇರಿದಂತೆ ಇತರೆ ಮಿಶ್ರ ಬೆಳೆಗಳು ಸಂಪೂರ್ಣ ಹಾಳಾಗಲಿವೆ ಎಂದರು. ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್ ತೊಗರಿ ಬೆಳೆ ಬೆಳೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕಾಲಿಕ ಹಾಗೂ ತುಂತುರು ಮಳೆಯಿಂದಾಗಿ ತೊಗರಿ ಬೆಳೆ ಹಾಳಾಗಿದೆ. ಜತೆಗೆ ಸಜ್ಜೆ ಬೆಳೆ, ಸೂರ್ಯಕಾಂತಿ ಬೆಳೆಯ ತೆನೆಗಳಲ್ಲಿಯೇ ಸಸಿ ಬೆಳೆದು ಬೆಳೆಹಾನಿಯಾಗಿರುವುದನ್ನು ಸ್ವತಃ ರೈತರ ಹೊಲಗಳಿಗೆ ಹೋಗಿ ಪರಿಶೀಲಿಸಲಾಗಿದೆ. ಹವಾಮಾನ ತಜ್ಞರು ಮತ್ತೆ ಐದಾರು ದಿನ ಮಳೆ ಬರುವ ಸಂಭವವಿದೆ ಎಂದು ವರದಿ ನೀಡುತ್ತಿದ್ದಾರೆ, ಇದರಿಂದ ರೈತರು ಬೆಳೆದ ಬೆಳೆ ಕೈತಪ್ಪಲಿದೆ ಎಂದು ಹೇಳಿದರು. ಸರ್ಕಾರ ಹತ್ತು ವರ್ಷಗಳ ಹಿಂದೆ ನಿಗದಿಪಡಿಸಿದ ಬೆಳೆ ಹಾನಿ ಪರಿಹಾರವನ್ನು 2 ಹೆಕ್ಟೇರ್ ಗೆ ಮೀಸಲಿರಿಸಿದೆ. ಅದನ್ನೇ ಈಗ ಮುಂದುವರೆಸಿದರೆ, ರೈತರಿಗೆ ಉಪಯೋಗವಿಲ್ಲ. ಬೆಳೆ ಹಾನಿ ಪರಿಹಾರ ಮೊತ್ತವನ್ನು ಹತ್ತು ಹೆಕ್ಟೇರ್ ಗೆ ಹೆಚ್ಚಿಸಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಗನಾಗಿದ್ದಾರೆ. ರೈತರ ಸಂಕಷ್ಟ ಅವರಿಗೆ ತಿಳಿದಿರುತ್ತೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಅವರಿಗೆ ಪತ್ರ ಬರೆಯಲಾಗುವುದು ಎಂದ ಶಾಸಕ ಬಯ್ಯಾಪೂರ, ಸರ್ಕಾರ ಯಾವ್ಯಾವುದಕ್ಕೊ ಬೆಲೆ ಹೆಚ್ಚಿಸುತ್ತೆ. ಆದರೆ, ರೈತರು ಬೆಳೆದ ಬೆಳೆಗೆ ಬೆಲೆ ಹೆಚ್ಚಿಸುವ ಮೂಲಕ ರೈತರಿಗೆ ನೆರವಾಗಬೇಕು. ಬೆಳೆ ಹಾನಿ ಪರಿಹಾರ ಅಂದರೆ ಕೇವಲ ಬತ್ತ ಬೆಳೆದವರಿಗೆ ಎಂದು ಕಂಡುಬರುತ್ತದೆ. ಕಟಾವಿಗೆ ಬಂದಂತಹ ತೊಗರಿ, ಸೂರ್ಯಕಾಂತಿ, ಸಜ್ಜೆ ಬೆಳೆಗಳು ಹವಾಮಾನ ವೈಪರೀತ್ಯದಿಂದ ಹಾಳಾಗುತ್ತಿದೆ. ಈ ಕುರಿತು ತೋಟಗಾರಿಕೆ ಸಚಿವರಿಗೆ, ಕೃಷಿ ಸಚಿವರಿಗೆ ಮನವರಿಕೆ ಮಾಡುತ್ತೇನೆ ಎಂದರು. ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಬೆಳೆ ಹಾನಿ ಆಗಿರುವ ಬಗ್ಗೆ ಪರಿಶೀಲಿಸಬೇಕು. ಬೆಳೆ ಹಾನಿಯ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಅಂಕಿ ಸಂಖ್ಯೆಗಳ ವರದಿ ಒಪ್ಪಿಸಬೇಕು. ಸರಿಯಾದ ವರದಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ರೈತರ ಜತೆಗೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು..!!