– ಶರಣಪ್ಪ ಕುಂಬಾರ
ಕೊಪ್ಪಳ : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರಗುವ ವಿಧಾನ ಪರಿಷತ್ ಚುನಾವಣೆಗೆ ಸಾಕಷ್ಟು ಅಳೆದು, ತೂಗಿದ ಬಿಜೆಪಿಯು ಕೊನೆಗೂ ಕ್ಷೇತ್ರದ ಹೊರಗಿನ ಚಿಕ್ಕೋಡಿ ಮೂಲದ ವಿಶ್ವನಾಥ ಬನಹಟ್ಟಿ ಎಂಬುವರಿಗೆ ಮಣಿ ಹಾಕಿದೆ..!
2009 ಕ್ಕಿಂತಲೂ ಮೊದಲು ಸಕ್ರಿಯ ಕಾರ್ಯಕರ್ತನಾಗಿ ಬಿಜೆಪಿಯಲ್ಲಿರುವ ವಿಶ್ವನಾಥ ಬನಹಟ್ಟಿ ಮೂಲತಃ ಚಿಕ್ಕೋಡಿಯವರು. ಹಾಲುಮತ ಸಮುದಾಯಕ್ಕೆ ಸೇರಿದ ಇವರು ಕೃಷಿ ಜೊತೆಗೆ ಪಕ್ಕಾ ವ್ಯಾಪಾರಿ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜರುಗಿದ ಸಾಕಷ್ಟು ಚುನಾವಣೆಗಳಲ್ಲಿ ಬಿಜೆಪಿ ಉಸ್ತುವಾರಿವಹಿಸಿಕೊಂಡು, ಪಕ್ಷ ಮುನ್ನೆಡಿಸಿದ ಜವಾಬ್ದಾರಿ ಇವರಿಗಿದೆ. 2009 ರಲ್ಲಿ ಜರುಗಿದ ದೇವದುರ್ಗ ಉಪ ಚುನಾವಣೆಯಲ್ಲಿ ಶಾಸಕ ಶಿವನಗೌಡ ನಾಯಕ ಪರ ಜವಾಬ್ದಾರಿ, ರಾಯಚೂರು-ಯಾದಗಿರಿ ಜಿಲ್ಲೆಗಳಲ್ಲಿನ ತಾಪಂ, ಜಿಪಂ, ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಯಚೂರು-ಯಾದಗಿರಿ ಜಿಲ್ಲೆಗಳ ಉಸ್ತುವಾರಿವಹಿಸಿಕೊಂಡ ಪಕ್ಷ ನಿಷ್ಠೆ ಜೊತೆಗೆ ವಿವಿಧ ಜವಾಬ್ದಾರಿ ಪರಿಗಣಿಸಿ ಟಿಕೇಟ್ ನೀಡಿರುವುದನ್ನು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ..!!