– ಶರಣಪ್ಪ ಕುಂಬಾರ
ಕೊಪ್ಪಳ : ಭತ್ತದ ಕಣಜ ಎಂದು ಕರೆಯಿಸಿಕೊಳ್ಳುವ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತವು ವಿಪರೀತ ಸುರಿಯುತ್ತಿರುವ ಮಳೆಗೆ ನೆಲ ಕಚ್ಚಿ ಹೋಗಿದೆ..!
ಈ ಭಾಗದಲ್ಲಿನ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನೇನು ಕಟಾವು ಮಾಡಬೇಕಾಗಿದ್ದ ಭತ್ತದ ಫೈರು ನೀರಿನಿಂದ ಆವರಿಸಿಕೊಂಡು ತೆನೆಯಲ್ಲಿಯೇ ಮೊಳಕೆವೊಡೆದು, ಹಾಳಾಗಿ ಹೋಗಿದೆ. ಈ ವರ್ಷದ (ಭತ್ತದ) ಬೆಳೆ ಕೈಗೆ ಬಂದಿದ್ದು ಬಾಯಿಗೆ ಬಾರದಂತಾಯಿತು. ದೇಶ ಸೇರಿದಂತೆ ವಿದೇಶಿಗರ ತುತ್ತಿನ ಚೀಲ ತುಂಬಬೇಕಾಗಿದ್ದ ಲಕ್ಷಾಂತರ ಟನ್ ಭತ್ತ ಕೊಳೆತು ಹೋಗಿದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿಕೊಂಡು ಬೆಳೆ ನೀರಿಕ್ಷೆಯಲ್ಲಿದ್ದ ‘ಕೃಷಿ ಪ್ರಿಯ’ರ ಪಾಲಿಗೆ ವಿಪರೀತವಾಗಿ ಸುರಿಯುತ್ತಿರುವ ಮಳೆ ವಿಷವಾಗಿ ಪರಿಣಮಿಸಿದೆ. ಈಗಾಗಲೇ ಕಟಾವು ಮಾಡಿಕೊಂಡು ತೇವಾಂಶ ಕಡಿತಕ್ಕೆ ಬಿಸಿಲಿಗೆ ಹರವಿದ ಭತ್ತದ ರಾಶಿಗಳು ನೀರು ಹೊಕ್ಕು ಕೊಳೆತು ಹೋಗಿವೆ. ಮಾಗಾನಿಯ (ಭತ್ತದ ಪ್ರದೇಶ) ಈ ಎಲ್ಲಾ ದೃಶ್ಯಗಳು ನೋಡುಗರನ್ನು ಮನಕುಲಕುವಂತಿವೆ. ಅನ್ನದ ಬಟ್ಟಲದೊಳಗೆ ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ಅನ್ನದಾತನು ತನ್ನ ಹೊಟ್ಟಿಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗಿದೆ. ಎಕರೆಗೆ ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸಿದ ರೈತನಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸೂಕ್ತ ಪರಿಹಾರ ನೀಡುವ ಮೂಲಕ ಅನ್ನದಾತನ ಬೆನ್ನಿಗೆ ನಿಲ್ಲಬೇಕೆಂಬುದು “ಕೃಷಿ ಪ್ರಿಯ” ಪತ್ರಿಕೆಯ ಆಶಯ..!!