– ಬಸಯ್ಯ ಹಿರೇಮಠ ಅವರಿಗೆ ‘ಕೃಷಿ ರತ್ನ ಪ್ರಶಸ್ತಿ’..!

 

 

– ಶರಣಪ್ಪ ಕುಂಬಾರ

ಕೊಪ್ಪಳ : ನುಗ್ಗೆ ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ಕೊಪ್ಪಳದ ಬಸಯ್ಯ ಹಿರೇಮಠ ಅವರಿಗೆ ‘ಕೃಷಿ ರತ್ನ ಪ್ರಶಸ್ತಿ’ ಒಲಿದುಬಂದಿದೆ..!

   ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಕೃಷಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಮಾಡಿರುವ ಕೃಷಿಕನಿಗೆ ನೀಡುವ 2020-2021 ಸಾಲಿನ ಕೃಷಿ ರತ್ನ ಪ್ರಶಸ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಬಸಯ್ಯ ಹಿರೇಮಠ ಅವರಿಗೆ ಹುಡುಕಿಕೊಂಡು ಬಂದಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ Nandi Organic Farm House Pvt Ltd ಸಂಸ್ಥಾಪಕರು ಆಗಿರುವ ಬಸಯ್ಯ ಅವರು ಸಾವಯವ ಪದ್ಧತಿಯಲ್ಲಿ ಔಷಧೀಯ ಗುಣ ಹೊಂದಿರುವ ನುಗ್ಗೆ ಬೆಳೆಯನ್ನು ಬೆಳೆದು, ಸಂಸ್ಕರಿಸಿದ ನುಗ್ಗೆ ತಪ್ಪಲಿನ ಔಷಧವನ್ನು ದೇಶ ಸೇರಿದಂತೆ ವಿದೇಶಕ್ಕೆ ರಫ್ತು ಮಾಡಿ, ಲಕ್ಷಾಂತರ ಜನರ ಆರೋಗ್ಯದ ಆಶಾಕಿರಣವಾಗಿದ್ದಾರೆ. ಹಿತ್ತಲು ಮದ್ದಾಗಿದ್ದ ನುಗ್ಗೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಅಪಾರ ಕೀರ್ತಿ ಬಸಯ್ಯ ಹಿರೇಮಠ ಅವರಿಗೆ ಸಲ್ಲುತ್ತದೆ. ಆರಂಭದಲ್ಲಿ ಸಾಕಷ್ಟು ನಷ್ಟ-ಕಷ್ಟ ಅನುಭವಿಸಿದ ಬಸಯ್ಯ ಅವರ ಸಾಧನೆ ಮಾತ್ರ ಅಪ್ರತಿಮವಾದದ್ದು. ಸರ್ವ ರೋಗಕ್ಕೂ ನುಗ್ಗೆ ಔಷಧ ರಾಮ ಬಾಣವಾದದ್ದು ಎಂಬ ಸಂದೇಶ ಸಾರಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಈ ವಿಶಿಷ್ಟ ಮತ್ತು ಅಗಾಧವಾದ ಸಾಧನೆಯನ್ನು ಗುರುತಿಸಿದ ರಾಯಚೂರು ಕೃಷಿ ವಿವಿಗೆ ಧನ್ಯವಾದಗಳನ್ನು ಹೇಳಲೇಬೇಕು. ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧಕನನ್ನು ಹುಡುಕಿ ಕೃಷಿ ರತ್ನ ಪ್ರಶಸ್ತಿ ನೀಡಿರುವುದನ್ನು ‘ಕೃಷಿ ಪ್ರಿಯ’ ಪತ್ರಿಕೆ ಸಂಪಾದಕ ಶರಣಪ್ಪ ಕುಂಬಾರ ಸೇರಿದಂತೆ, ಪತ್ರಿಕಾ ಬಳಗ ಅಭಿನಂದಿಸಿದೆ..!!