– ಶರಣಪ್ಪ ಕುಂಬಾರ.
ಕೊಪ್ಪಳ : ಹೆಸರು ಬೆಳೆಗೆ ಹಳದಿ ನಂಜಾನು ರೋಗ ಆವರಿಸಿಕೊಂಡು ಬೆಳೆ ಸಂಪೂರ್ಣ ಹಾಳಾಗುವ ಹಂತಕ್ಕೆ ಬಂದು ತಲುಪಿವೆ. ಹೆಸರು ಬೆಳೆದು, ಸಾಕಷ್ಟು ಫಸಲು ನಿರೀಕ್ಷೆಯಲ್ಲಿದ್ದ ರೈತರು ಮಾತ್ರ ಕಂಗಾಲಾಗಿದ್ದಾರೆ..!
ಕೃತಿಕ ಮಳೆ ಸೇರಿದಂತೆ ರೋಹಿಣಿ ಮತ್ತು ಮೃಗಶಿರ ಮಳೆಗೆ ಅಲ್ಪ ಪ್ರಮಾಣದಲ್ಲಿ ಬಿತ್ತನೆಯಾದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಳ್ಳುತ್ತಿದೆ. ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯ ಜೊತೆಗೆ ಎರಡನೇ ಬೆಳೆ ಬೆಳೆಯುವ ತವಕದಲ್ಲಿ ಕೃಷಿಕರ ಪಾಲಿಗೆ ಹಳದಿ ನಂಜಾನು ರೋಗ ಕಂಟಕವಾಗಿದೆ. ಹೆಕ್ಟೇರ್ ಗೆ ಲಕ್ಷಾಂತರ ರೂಪಾಯಿಗಳ ಪೈರು ಕನಸು ಕಂಡಿದ್ದ ಹಳದಿ ನಂಜಾನು ರೋಗ ಆವರಿಸಿಕೊಂಡು ಹಿನ್ನೆಲೆಯಲ್ಲಿ ರೈತರಿಗೆ ದಿಕ್ಕುದೊಚದಂತಾಗಿದೆ. ಕಾಳು ಉತ್ಪಾದನೆ (ಕಟ್ಟುವ) ಸಮಯದಲ್ಲಿ ಹರಡಿಕೊಂಡಿರುವ ಹಳದಿ ನಂಜಾನು ರೋಗದಿಂದ ಈ ವರ್ಷದ ಒಟ್ಟು ಉತ್ಪಾದನೆಗೆ ಹೊಡೆತ ಗ್ಯಾರಂಟಿ.
ಹಳದಿ ನಂಜಾನು ರೋಗ ನಿಯಂತ್ರಣಕ್ಕೆ ಸೂಚನೆ :
(1) ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗಳ (ತಾಕುಗಳ) ಮಧ್ಯೆ 12 ಹಳದಿ ಅಂಟು ಪ್ಯಾಡಗಳನ್ನು ಅಲ್ಲಲ್ಲಿ ನೇತು ಹಾಕಬೇಕು.
(2) ಥಯೋಮಿತಾಕ್ಸಮ್ ರಾಸಾಯನಿಕವನ್ನು 100 ಗ್ರಾಂ ಅನ್ನು 500 ಲೀಟರ್ ನೀರಿನೊಂದಿಗೆ ಬೇರಸಿ ಸಿಂಪಡಿಸಬೇಕು ಅಲ್ಲದೆ,
(3) ಇಮಿಡಾಕ್ಲೋಪ್ರಿಡ್ ಎಂಬ ರಾಸಾಯನಿಕವನ್ನು 100 ಎಂ.ಎಲ್ ದ್ರಾವಣವನ್ನು 500 ಲೀಟರ್ ನೀರಿನ ಮಿಶ್ರಣದೊಂದಿಗೆ ಸಿಂಪಡಣೆ ಕೈಗೊಂಡರೆ ಹೆಸರು ಬೆಳೆಗೆ ತಗುಲಿದ ಹಳದಿ ನಂಜಾನು ರೋಗ ನಿಯಂತ್ರಣವಾಗುವುದು. ಅಲ್ಲದೆ, ಆರಂಭದಲ್ಲಿಯೇ ಹಳದಿ ನಂಜಾನು ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತು ಹಾಕುವುದರಿಂದಲೂ ರೋಗ ನಿಯಂತ್ರಣ ಸಾಧ್ಯವೆಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಖಾದರಬೀ ಸೂಚನೆ ನೀಡಿದ್ದಾರೆ..!