– ಜಾನುವಾರು ಕಾಲುಗಳಿಗೂ ಕಂಟಕವಾದ ಕೊರೋನಾ ವೈರಸ್..!

– ಶರಣಪ್ಪ ಕುಂಬಾರ.

ಕೊಪ್ಪಳ : ಜಾನುವಾರು ಪಾದಗಳ ರಕ್ಷಣೆಗೆ ಬೇಕಾಗುವ ನಾಲುಗಳು ಲಾಕ್ ಡೌನ್ ನಲ್ಲಿ ಸರಬರಾಜು ಆಗದ ಹಿನ್ನೆಲೆಯಲ್ಲಿ ಮನುಕುಲದ ಜೊತೆಗೆ ಜಾನುವಾರುಗಳು ಕೂಡಾ ಕಂಟಕ ಅನುಭವಿಸಿದ ಪ್ರಸಂಗಗಳು ಈಗಾಗಲೇ ಜರುಗಿ ಹೋಗಿವೆ..!

 

ಬೆಲೆ ಬಾಳುವ ಜಾನುವಾರುಗಳ ಪಾದ ರಕ್ಷಣೆಗೆ ‘ನಾಲು’ಗಳನ್ನು ಬಡಿಸುವುದು ಬಹಳಷ್ಟು ಅವಶ್ಯಕ. ವಿಶೇಷವಾಗಿ ಮುಂಗಾರು ತಂಪು ಹವಾಮಾನದಲ್ಲಿ ಜಾನುವಾರುಗಳ ಕಾಲುಗಳಿಗೆ ನಾಲನ್ನು ಕಟ್ಟಿಸದೇ ಹೋದರೆ, ಕಾಲು ಬೇನೆ ಮತ್ತು ಮುಳ್ಳು ಕಲ್ಲುಗಳಿಂದ ಜಾನುವಾರುಗಳು ಮೂಲೆ ಗುಂಪು ಆಗುವುದು ಖಚಿತ. ಇಂತಹ ಅವಶ್ಯಕ ಕಬ್ಬಿಣದ ಸಣ್ಣ ಪ್ರಮಾಣದ ಉಪಕರಣಗಳಾಗಿರುವ ನಾಲುಗಳ ತಯಾರಿಕೆಗೆ ಮೂಲ ಆಂದ್ರಪ್ರದೇಶ. ಕೊರೋನಾ ವೈರಸ್ ಹರಡುವುದಕ್ಕಾಗಿ ಜಾರಿಗೆ ಬಂದಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಾಲುಗಳ ತಯಾರಿಕೆ ಇಲ್ಲದ ಕಾರಣಕ್ಕಾಗಿ ರಾಜ್ಯಕ್ಕೆ ಸರಬರಾಜು ನಿಂತು ಹೋಗಿದೆ. ಕೊರತೆ ಮಧ್ಯದಲ್ಲಿಯೂ ದುಬಾರಿ ಬೆಲೆ ಕಂಡಿರುವ‌‌ ನಾಲುಗಳು ಜಾನುವಾರುಗಳಿಗೆ ಗಗನ ಕುಸುಮವಾಗಿವೆ. ಒಂದು ಜೊತೆ ಎತ್ತುಗಳಿಗೆ ಸಾವಿರ ರೂಪಾಯಿಗಳನ್ನು ನಿಗದಿ ಪಡಿಸಿರುವ ನಾಲುಗಾರರು, ನಾಲುಗಳು ಆಂದ್ರಪ್ರದೇಶದಿಂದ ಸರಬರಾಜು ಆಗುತ್ತಿಲ್ಲವೆಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ.

 

 

 

 

ಲಾಕ್ ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ-ಸೂಲ ಮಾಡಿಯಾದರು ರೈತರು ತಮ್ಮ ಎತ್ತುಗಳಿಗೆ (ಜಾನುವಾರುಗಳಿಗೆ) ನಾಲುಗಳನ್ನು ಬಡಿಸಬೇಕಾಗಿದೆ. ಇಲ್ಲವಾದಲ್ಲಿ ಬೆಲೆ ಬಾಳುವ ಎತ್ತುಗಳ ಕಾಲುಗಳಿಗೆ ರಕ್ಷಣೆ ಇಲ್ಲವಾಗುತ್ತದೆ ಎಂದು ರೈತ ಭೀಮಣ್ಣ ದಾಸನೂರು ‘ಕೃಷಿ ಪ್ರಿಯ’ ಪತ್ರಿಕೆಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ಮಾಹಾಮಾರಿಯ ಪಾಪ ಮನುಕುಲದ ಜೊತೆಗೆ ಮೂಕ ಮುಗ್ಧ ಜಾನುವಾರುಗಳಿಗೂ ತಟ್ಟಿರುವುದಂತು ಸತ್ಯ..!

 

 

ಚಿತ್ರ : ಗಿರಿಧರ ಕೆ. ಪೂಜಾರ.