-‌ ಕ್ರೀಡಾಪಟುಗಳ ಪಾಲಿಗೆ ಶಾಶ್ವತ ಕಂಟಕವಾದ ಕೊರೋನಾ ವೈರಸ್..!   

– ಶರಣಪ್ಪ ಕುಂಬಾರ.

ಕೊಪ್ಪಳ : ಕ್ರೀಡಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದು ಪ್ರತಿ ನಿತ್ಯ ತಮ್ಮ ನೆಚ್ಚಿನ ಕ್ರೀಡೆಗಳಲ್ಲಿ ಸಾಕಷ್ಟು ವರ್ಕೌಟ್‌ಗಳ ಮೂಲಕ ತರಬೇತಿ ಪಡೆದ ಅದೇಷ್ಟೋ, ಉದಯೋನ್ಮುಖ ಕ್ರೀಡಾಪಟುಗಳ ಜೀವನಕ್ಕೆ ಕೊರೋನಾ ವೈರಸ್‌ ಮಾತ್ರ ಶಾಶ್ವತ ಕಂಟವಾಗಿದ್ದು ಇತಿಹಾಸ..!

ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಕಳೆದ ವರ್ಷದಿಂದ ಶಾಲಾ-ಕಾಲೇಜಗಳು ಸೇರಿದಂತೆ ಅನೇಕ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರಗಳು ಮುಚ್ಚಿಕೊಂಡಿವೆ. ಆದರೆ, ಪ್ರತಿ ವರ್ಷ ಜರುಗಬೇಕಾಗಿದ್ದ ಶಾಲಾ ಮಟ್ಟದಿಂದ ಹಿಡಿದು, ಹೋಬಳಿ, ತಾಲೂಕಾ, ಜಿಲ್ಲಾ, ವಿಭಾಗ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಜರುಗಲೇ ಇಲ್ಲ. ಈ ಎಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಸ್ಥಾನ ಪಡೆದುಕೊಳ್ಳಬೇಕು. ಪಡೆದ ಸ್ಥಾನಗಳಿಂದ ದೊರಕುವ ಕ್ರೀಡಾ ಮೀಸಲಾತಿಯಿಂದ ಉನ್ನತ ವಿದ್ಯಾಭ್ಯಾಸ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಉನ್ನತ ಹುದ್ದೆ (ನೌಕರಿ) ಗಿಟ್ಟಿಸಿಕೊಳ್ಳಬೇಕು ಎಂಬ ಸುಮಾರು ವರ್ಷಗಳ ಸತತ ಪ್ರಯತ್ನಗಳ ನಿರೀಕ್ಷೆಯಲ್ಲಿದ್ದ ಸಾವಿರಾರು ಕ್ರೀಡಾಪಟುಗಳ ಕನಸು ಮಾತ್ರ ನುಚ್ಚುನೂರಾಗಿರುವುದಂತು ಸತ್ಯ.

ಮೀಸಲಾತಿಯಿಂದ ವಂಚಿತ :
೨೦೨೧ ನೇ ಸಾಲಿನಲ್ಲಿ ಜರುಗಬೇಕಾಗಿದ್ದ ಕ್ರೀಡಾಕೂಟಗಳು ನಡೆಯದಿರುವ ಕಾರಣದಿಂದ ಟಿ.ಇ.ಟಿ, ಸಿ.ಇ.ಟಿ‌, ಎನ್.ಇ.ಟಿ, ನೆಟ್, ಸೇಟ್‌ ಹಾಗೂ ನೇಮಕಾತಿಗಳು ಇತ್ಯಾದಿ ಮೀಸಲಾತಿಗಳಿಂದ ಕ್ರೀಡಾಪಟುಗಳು ಕ್ರೀಡಾ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಕ್ರೀಡಾ ಮೀಸಲಾತಿ ಬಯಸಿದ ಸಾವಿರಾರು ಆಕಾಂಕ್ಷಿಗಳ ಸ್ಥಿತಿ ಡೋಲಾಯಮಾನ. ವಿಶೇಷವಾಗಿ ಕ್ರೀಡಾ ಮೀಸಲಾತಿಯನ್ನು ನೆಚ್ಚಿಕೊಂಡಿದ್ದ ಬಹುತೇಕ ಕ್ರೀಡಾಪಟುಗಳು ಸಧ್ಯ ಕಣ್ಣಿರಿನಲ್ಲಿ ಕೈ ತೊಳೆಯಬೇಕಾದ ಪರಿಸ್ಥಿತಿ ಒದಗಿಬಂದಿದೆ.

 ಒಂದು ವರ್ಷದ ಭವಿಷ್ಯ ಹಾಳು :
ತಮ್ಮ ತಮ್ಮ ಕ್ರೀಡೆಗಳಲ್ಲಿ ಸಾಧನೆಗೈಯಬೇಕು ಎಂಬ ಕನಸು ಹೊಂದಿದ್ದ ಯುವ ಕ್ರೀಡಾಪಟುಗಳ
ಪಾಲಿಗೆ ೨೦೨೧ ನೇ ವರ್ಷವನ್ನ (ಶೈಕ್ಷಣಿಕ ವರ್ಷ) ಕೊರೋನಾ ವೈರಸ್‌ ಹಾಳು ಮಾಡಿದಂತಾಗಿದೆ. ಕ್ರೀಡಾಕೂಟದ ಪೈಪೋಟಿಯಲ್ಲಿ ಕೂದಲೆಳೆ ಅಂತರದಲ್ಲಿ ಸ್ಥಾನ ಕಳೆದುಕೊಳ್ಳುವ ಕ್ರೀಡಾಪಟುಗಳು ತಮ್ಮ ಪ್ರಾಣದ ಹಂಗನ್ನು ತೊರೆದು, ಅವಿರತ ಶ್ರಮದ ಮೂಲಕ ಲಕ್ಷಾಂತರ ರೂಪಾಯಿಗಳ ಖರ್ಚುಗಳ ಮೂಲಕ ತಮ್ಮ ನೆಚ್ಚಿನ ಕ್ರೀಡೆಯಲ್ಲಿ ತರಬೇತಿ ಪಡೆದ ಸಾವಿರಾರು ಕ್ರೀಡಾಪಟುಗಳ ಒಂದು ವರ್ಷದ ಭವಿಷ್ಯ ಹಾಳಾಗಿ ಹೋಗಿದೆ. ಪ್ರತಿವರ್ಷದ ಕಾಂಪೀಟೇಶನ್‌ನಲ್ಲಿ ಒಂದು ವರ್ಷ ಹಾಳು ಮಾಡಿಕೊಂಡಿರುವ ಕ್ರೀಡಾಪಟುಗಳು ಕೊರೋನಾ ವೈರಸ್‌ ವಿರುದ್ಧ ಹಿಡಿ ಶಾಪ್‌ ಹಾಕುತ್ತಿದ್ದಾರೆ. ಮತ್ತೆ ಪೈಪೋಟಿ ನೀಡಬೇಕು ಎನ್ನುವ ಕ್ರೀಡಾಪಟುಗಳಿಗೆ ವಯಸ್ಸಿನ ಮೀತಿ ಕೂಡಾ ಎದುರಾಗಿದೆ. ಸಬ್‌ ಜ್ಯೂನಿಯರ್‌ ಜೊತೆಗಿನ ಸೇಣಸಾಟ ಕಷ್ಟ ಸಾಧ್ಯವೆಂಬ ಅಭಿಪ್ರಾಯವು ಕೂಡಾ ಕ್ರೀಡಾವಲಯದಲ್ಲಿ ಕೇಳಿ ಬರುತ್ತಿದೆ.

 ಕ್ರೀಡಾಪಟು ಅಭಿಪ್ರಾಯ :
ವರ್ಷವಿಡಿ ಕ್ರೀಡಾ ತರಬೇತಿ ಪಡೆದ ನಮಗೆ ಕ್ರೀಡಾಕೂಟಗಳು ಇಲ್ಲ ಅಂದಾಗ ಶಾಕ್‌ ಆಗುತ್ತದೆ. ನಮ್ಮ ಹಿಂದಿನ ಬ್ಯಾಚ್‌ ನ ಕ್ರೀಡಾಪಟುಗಳ ಸಾಮರ್ಥ್ಯ ಹೆಚ್ಚಿರುವ ಸಾಧ್ಯತೆಗಳಿಂದ ಹಿರಿಯ ಕ್ರೀಡಾಟುಗಳು ಕ್ರೀಡೆಯಲ್ಲಿನ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನಗಳಿಂದ ವಂಚಿತರಾಗಬೇಕಾಗುತ್ತದೆ. ಜೊತೆಗೆ ಹಾಳಾಗಿ ಹೋಗಿರುವ ಒಂದು ವರ್ಷವು ಮರಳಿ ಬರುವುದಿಲ್ಲ. ಕ್ರೀಡೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಡಬೇಕಾಗಿರುವ ಸಂದರ್ಭದಲ್ಲಿ ಒಂದು ವರ್ಷದ ಗ್ಯಾಪ್‌ ನಷ್ಟ ತಂದೊಡ್ಡಿದೆ.

– ದೀಪಾ ನಾಗಲಿಕರ, (ವಾಲಿಬಾಲ್ ಕ್ರೀಡಾಪಟು) ಕ್ರೀಡಾ ವಸತಿ ನಿಲಯ, ಮೈಸೂರು.    

   ‌‌  ‌‌‌‌      ‌‌‌‌       

ಹಿರಿಯ ತರಬೇತಿದಾರರ ಅಭಿಪ್ರಾಯ :
ಪಠ್ಯ ಬೋಧನೆಗೂ ಕ್ರೀಡಾ ತರಬೇತಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಪಠ್ಯಗಳ ಬೋಧನೆಯಲ್ಲಿ ಮೇದಳಿಗೆ ಸಾಕಷ್ಟು ಕೆಲಸ ಇರುತ್ತದೆ. ಆದರೆ, ಕ್ರೀಡಾ ತರಬೇತಿಯಲ್ಲಿ ಆಯಾ ವಯೋಮಾನಕ್ಕೆ ತಕ್ಕಂತೆ ಕ್ರೀಡಾ ಚಟುವಟಿಕೆಗಳಿಗೆ ಮೇದಳಿನ ಜೊತೆಗೆ ದೇಹದ ಅಂಗಾಂಗಳು ಸಂಪೂರ್ಣ ಸ್ಪಂದಿಸಬೇಕು. ಈ ಹಿನ್ನಲೆಯಲ್ಲಿ ಸತತವಾಗಿ ತರಬೇತಿ ಪಡೆದ ಕ್ರೀಡಾಪಟುಗಳಿಗೆ ಕಳೆದ ವರ್ಷದ ಗ್ಯಾಪ್‌ ತುಂಬಲು ಮಾತ್ರ ಸಾಧ್ಯವಿಲ್ಲ..!

ಯತಿರಾಜು, ಎ.ಎನ್.
ಖೋ-ಖೋ, ಹಿರಿಯ ತರಬೇತಿದಾರ, ಕೊಪ್ಪಳ.