– ಶರಣಪ್ಪ ಕುಂಬಾರ.
ಕೊಪ್ಪಳ : ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ಪ್ರಕಟಿಸಿದ ಜಿಲ್ಲಾ ಹಾಗೂ ತಾಲೂಕಾ ಪಂಚಾಯಿತಿ ಕ್ಷೇತ್ರಗಳಿಗೆ ನಿಗದಿಪಡಿಸಿದ ‘ಮೀಸಲಾತಿ’ ಉಲ್ಟಾ-ಪಲ್ಟಾ ಆಗಿ ತಮ್ಮದೇ ಜಾತಿ ಮೀಸಲಾತಿ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿ ರಾಜಕಾರಣಿಗಳಿಗೆ ಪ್ರಕಟಗೊಂಡ ಮೀಸಲಾತಿ ಮಾತ್ರ ಪೈಪೋಟಿ ಮೊದಲೇ ಮೀಸೆ ಮಣ್ಣಾಗಿಸಿದೆ..!?
ಹೌದು, ಇದು ಕೊಪ್ಪಳ ಜಿಲ್ಲೆಯ 30 ಜಿಲ್ಲಾ ಪಂಚಾಯಿತಿ ಹಾಗೂ 100 ತಾಲೂಕಾ ಪಂಚಾಯಿತಿ ಕ್ಷೇತ್ರಗಳ ಬಹುತೇಕ ಕ್ಷೇತ್ರಗಳ ರಾಜಕೀಯ ಸ್ಥಿತಿ. ಸಾಮಾನ್ಯ ಹಾಗೂ ಪುರುಷ ಮೀಸಲಾತಿ ಮೇಲೆ ಕಣ್ಣು ಇಟ್ಟುಕೊಂಡಿದ್ದ ಬಹುತೇಕ ಪುರುಷ ರಾಜಕಾರಣಿಗಳ ಪಾಲಿಗೆ ಈಗ ಪ್ರಕಟವಾಗಿರುವ ಮೀಸಲಾತಿ ಮಾತ್ರ ಸಿಂಹ ಸ್ವಪ್ನವಾಗಿರುವುದಂತು ಸತ್ಯ. ಈಗಾಗಲೇ ಆಯಾ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮೇಲೆ ಕಣ್ಣಿಟ್ಟುಕೊಂಡಿದ್ದ ಹಾಲಿ, ಮಾಜಿ, ಈ ಹಿಂದಿನ ಸ್ಪರ್ಧೆಯಲ್ಲಿ ಪರಾಭವಗೊಂಡ, ಈಗ ತಾನೇ ರಾಜಕೀಯ ಕನಸು ಕಂಡಿದ್ದ ಯುವ ರಾಜಕಾರಣಿಗಳಿಗೆ ಮತ್ತು ಕುಟುಂಬದ ಸದಸ್ಯರನ್ನ ರಾಜಕೀಯ ಮುನ್ನಡೆಗೆ ತರಬಯಸಿದ್ದ ಜಿಲ್ಲೆಯ ಹಿರಿಯ ರಾಜಕಾರಣಿಗಳಿಗೆ ಈ ಸದ್ಯ ನಿಗದಿಯಾದ ಮೀಸಲಾತಿ ಮಾತ್ರ ‘ಬಿಸಿತುಪ್ಪ’ವಾಗಿ ಪರಿಣಮಿಸಿದೆ.
ಅಸಮಾಧಾನ : ಕ್ಷೇತ್ರವು ತಮ್ಮ ಮೀಸಲಾತಿಯಿಂದ ಕೈ ತಪ್ಪಿ ಹೋಯಿತು ಎಂಬ ಅಸಮಾಧಾನ ಎಲ್ಲೆಡೆ ಈಗಾಗಲೇ ಆರಂಭವಾಗಿದೆ. ಅವಕಾಶವಂಚಿತ ಪ್ರಬಲ ಆಕಾಂಕ್ಷಿಗಳು ರಾಜಕೀಯ ಲೆಕ್ಕಾಚಾರದ ಮೇಲೆ ಹಿರಿಯ ರಾಜಕಾರಣಿಗಳ ಮೇಲೆ ಒತ್ತಡ ತರುವ ಕೆಲಸಗಳು ಕೂಡಾ ಜೋರಾಗಿವೆ. ‘ಮಿನಿ ಅಸೆಂಬ್ಲಿ‘ ಎಂದು ಕರೆಯಲ್ಪಡುವ ಈ ಸ್ಥಳೀಯ ಚುನಾವಣೆ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಿಗೆ ಮುನ್ಸೂಚನೆ ಆಗಲಿರುವ ಕಾರಣದಿಂದ ಜಿಲ್ಲೆಯಲ್ಲಿ ಚುನಾಯಿತರಾದವರು ರಾಜಿ ಪಂಚಾಯಿತಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ ಪರಿಸ್ಥಿತಿ ಗಮನಿಸಿದರೆ, ಇತ್ತೀಚಿಗೆ ಪ್ರಕಟವಾದ ಜಿಪಂ ಹಾಗೂ ತಾಪಂ ಮೀಸಲಾತಿ ಮಾತ್ರ ಕೆಲ ಆಕಾಂಕ್ಷಿಗಳ ಪಾಲಿಗೆ ಸ್ಪರ್ಧಿಸುವ ಮುನ್ನವೇ ಮೀಸೆ ಮಣ್ಣಾಗಿಸಿರುವುದಂತು ಸತ್ಯ..!