ವಿಶೇಷ ಚೇತನರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಾಳಿಂಗಪ್ಪ ಪ್ರಥಮ ಸ್ಥಾನ: ಶಿಕ್ಷಣ ಇಲಾಖೆಯಿಂದ ಗೌರವ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : 17ರ ವಯೋಮಿತಿ ಒಳಗಿನ ವಿಶೇಷ ಚೇತನರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದ ವಿಶೇಷ ಚೇತನ ಕಾಳಿಂಗಪ್ಪ ಹನುಮಪ್ಪ ಇಟಗಿ ಅವರನ್ನು ಶಿಕ್ಷಣ ಇಲಾಖೆಯಿಂದ ಜ.19 ಶುಕ್ರವಾರ ಗೌರವಿಸಲಾಯಿತು.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಜ.17 ಮತ್ತು 18 ರಂದು ಜರುಗಿದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ತಾಲೂಕಿನ ತುಗ್ಗಲಡೋಣಿ ಗ್ರಾಮದ ಶ್ರೀರಾಮಣ್ಣ ಮಲ್ಲಪ್ಪ ಕುಣಮಿಂಚಿ ಸರ್ಕಾರಿ ಪ್ರೌಢಶಾಲೆ ವಿಶೇಷ ಚೇತನ ವಿದ್ಯಾರ್ಥಿ ಕಾಳಿಂಗಪ್ಪ ಹನುಮಪ್ಪ ಇಟಗಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾನೆ.

ವಿದ್ಯಾರ್ಥಿಯ ಸಾಧನೆ ಮೆಚ್ಚಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ತಮ್ಮ ಕಾರ್ಯಾಲಯದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಕಾಳಿಂಗಪ್ಪ ಇಟಗಿಯನ್ನು ಸನ್ಮಾನಿಸಿ ಬಹುಮಾನ ನೀಡಿ ಆತನ ಪ್ರತಿಭೆಗೆ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಲ್ಲಿರುವ ಕೊರತೆಗಳೇ ಸಾಧನೆಗೆ ಪ್ರೇರಣೆಯಾಗಬೇಕು ಅದಕ್ಕೆ ಉತ್ತಮ ನಿದರ್ಶನ ತುಗ್ಗಲ ದೋಣಿ ಸರ್ಕಾರಿ ಪ್ರೌಢಶಾಲೆಯ ಕಾಳಿಂಗಪ್ಪ ಇಟಗಿ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ದೈಹಿಕ ಶಿಕ್ಷಣ ವಿಷಯ ಪರೀವೀಕ್ಷಕರಾದ ಎಮ್ ಸರಸ್ವತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಉಮೇಶ ಎತ್ತಿನಮನಿ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ ಬಿಳಿಯಪ್ಪನವರ್, ಸರ್ಕಾರಿ ನೌಕರ ಸಂಘದ ನಿರ್ದೇಶಕ ಗುರಪ್ಪ ಕುರಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಸೂಡಿ, ಇಲಾಖೆಯ ಶಿವಶಂಕರಪ್ಪ, ಚಂದ್ರಶೇಖರ ಶಿರಗುಂಪಿ, ಕ್ರೀಡಾ ತಂಡದ ವ್ಯವಸ್ಥಾಪಕ ಮಲ್ಕಪ್ಪ ಚಕ್ಕಡಿ, ಬಿ ಆರ್ ಪಿ ಡಾ ಜೀವನಸಾಬ ವಾಲಿಕಾರ, ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇವಳಿ ಇತರರಿದ್ದರು.