ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಥಿಲಾವಸ್ಥೆಗೊಳಪಟ್ಟ ಒಪಿಡಿ ಕೊಠಡಿಗಳ ಮೇಲ್ಛಾವಣಿಯಲ್ಲಿ ಮೇಲ್ಮಹಡಿಯ ಶೌಚಾಲಯದ ನೀರು ಸೋರಿಕೆಯಾಗುತಿದ್ದು, ಒಪಿಡಿ ಸೇವೆ ನೀಡುವ ತಜ್ಞರು, ತಪಾಸಣೆಗೆ ಬರುವ ರೋಗಿಗಳು, ಸಾರ್ವಜನಿಕರ ಮೇಲೆ ಶೌಚನೀರಿನ ಅಭಿಷೇಕವಾಗುತ್ತಿದೆ ಎಂದು ಜನ ದೂರಿದರು.
ಆಸ್ಪತ್ರೆಯ ಕ್ಷಯರೋಗ ಮೇಲ್ವಿಚಾರಕರ ತಪಾಸಣೆ ಕೊಠಡಿ, ಚಿಕ್ಕಮಕ್ಕಳ ತಜ್ಞರ ತಪಾಸಣಾ ಕೊಠಡಿ, ಯಲುಬು ಕೀಲು ತಜ್ಞರ ತಪಾಸಣಾ ಕೊಠಡಿ, ವೈದ್ಯರ ವಿಶ್ರಾಂತಿ ಕೊಠಡಿ, ಚುಚ್ಚುಮದ್ದು ಸಂಗ್ರಹಣಾ ಕೊಠಡಿ ಸೇರಿದಂತೆ ಕೋವಿಡ್ ವಾರ್ಡಗಳ ಮೇಲ್ಛಾವಣಿಗಳು ಮೇಲ್ಮಹಡಿಯಲ್ಲಿರುವ ಶೌಚಾಲಯಗಳಿಂದ ಸೋರಿಕೆಯಾಗುವ ನೀರಿನ ತೇವಾಂಶದಿಂದ ತಂಪೇರಿ ಸಿಮೇಂಟ್, ಪಿಒಪಿ ಕೀಳಲಾರಂಭಿಸಿವೆ. ಗೋಡೆಗಳು ತಂಪೇರಿಕೊಂಡಿವೆ. ತಂಪೇರಿದ ಗೋಡೆಗಳಲ್ಲಿ ವಿದ್ಯುತ್ ಅರ್ತಿಂಗ್ ಪಾಸಾಗುತ್ತಿರುವುದಾಗಿ ಸ್ವಚ್ಛತಾ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಾರೆ.
ಜೊತೆಗೆ ಮೊದಲನೆ ಮಹಡಿಗೆ ಸಂಪರ್ಕ ಹೊಂದಿರುವ ಜಾರು ಮೆಟ್ಟಿಲು ಮೇಲ್ಚಾವಣಿ ಸಿಮೆಂಟ್ ಪದರು ಕಿತ್ತುಬಿದ್ದು ತುಕ್ಕುಹಿಡಿದ ಕಬ್ಬಿಣದ ಸರಳುಗಳು ಕಾಣುತ್ತಿವೆ. ಜೊತೆಗೆ ಸಿಮೇಂಟ್ ಕಲಂ, ಬೀಮ್ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಯಾವುದೇ ಸಂದರ್ಭದಲ್ಲಿ ಕಳಚಿಬೀಳುವ ಸಾಧ್ಯತೆ ಇದೆ. ನಿತ್ಯ ಭಯದಲ್ಲಿಯೇ ವೈದ್ಯರು, ಆರೋಗ್ಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೋರುವ ಕೊಠಡಿಯಲ್ಲಿ ಒಪಿಡಿ ಸೇವೆ ನೀಡುತ್ತಿರುವ ಯಲುಬು ಕೀಲು ತಜ್ಞರು, ಚಿಕ್ಕಮಕ್ಕಳ ತಜ್ಞರು ಸೇರಿದಂತೆ ತಪಾಸಣೆಗೆ ಬರುವ ಕೂಸು, ಚಿಕ್ಕಮಕ್ಕಳು ಅವರ ಪೋಷಕರ ಮೇಲೆ ಮೇಲ್ಮಹಡಿಯ ಶೌಚ ನೀರು ಮೈಮೇಲೆ ಹನಿ ಹನಿ ಬೀಳುತ್ತಿರುವುದರಿಂದ ಹಿಂಸೆಪಟ್ಟುಕೊಳ್ಳುವಂತಾಗಿದೆ. ಆಸ್ಪತ್ರೆ ಆಡಳಿತಾಧಿಕಾರಿಗಳು ಎಚ್ಚೆತ್ತು ದುರಸ್ತಿಗೆ ಮುಂದಾಗಬೇಕು
– ಸಾರ್ವಜನಿಕರು.
ಕಳೆದೊಂದು ವರ್ಷದಿಂದ ಶಿಥಿಲಾವಸ್ಥೆಗೊಳಪಟ್ಟ ಕೊಠಡಿಗಳು ಸೋರಲಾರಂಭಿಸಿವೆ. ವರ್ಷದ ಹಿಂದೆ ಕೊಠಡಿಗಳ ನಿರ್ಮಾಣಕ್ಕೆ ಇಲಾಖೆಯಿಂದ 2,40 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಪತ್ರಿಕೆ ಪ್ರಕಟಣೆ ಹೊರಡಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಮೂರ್ನಾಲ್ಕು ತಿಂಗಳೊಳಗೆ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಆರಂಭಿಸುತ್ತಾರೆ.
– ಡಾ.ಕೆ.ಎಸ್. ರೆಡ್ಡಿ
ತಜ್ಞವೈದ್ಯ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ.