– ತೋಳ ದಾಳಿಯಿಂದ ಕುರುಪಿಯಾದ ಮಹಿಳೆಗೆ ಕವಡೆ ಕಾಸು ನೀಡಿ ಕೈ ತೊಳೆದುಕೊಂಡ ಅರಣ್ಯ ಇಲಾಖೆ..!

– ಶರಣಪ್ಪ ಕುಂಬಾರ.

ಕೊಪ್ಪಳ : ತೋಳ ದಾಳಿಯಿಂದ ಮುಖದ ಸೌಂದರ್ಯ ಹಾಳುಮಾಡಿಕೊಂಡು ಸಂಪೂರ್ಣ ಕುರುಪಿಯಾಗಿರುವ ಹೆಣ್ಣು ಮಗಳಿಗೆ ಅರಣ್ಯ ಇಲಾಖೆ ಕವಡೆ ಕಾಸಿನ ಪರಿಹಾರ ನೀಡಿ ಕೈ ತೊಳಿದುಕೊಂಡಿದೆ..!

    ತೋಳ ದಾಳಿಗೆ ತುತ್ತಾಗಿ ತನ್ನ ಇಡೀ ಮುಖದ ಅಂದವನ್ನು ಹಾಳುಮಾಡಿಕೊಂಡು ಶಾಶ್ವತವಾಗಿ ಮುಖ ಗವಸನ್ನು (ಮಾಸ್ಕ) ಹಾಕಿಕೊಂಡು ಜೀವನ ಸಾಗಿಸುತ್ತಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಹೊಸೂರ ಗ್ರಾಮದ ನಾಗಮ್ಮ ಮಹಾಂತೇಶ ಗುಡಿಹಿಂದಲ ಎಂಬ ನತದೃಷ್ಟ ಮಹಿಳೆ.

(ತೋಳ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವಾಗಿನ ನಾಗಮ್ಮನ ಮುಖ)

   ಅದು 14-03-2020 ರ ಬೆಳಗಿನ ಜಾವದಂದು ತೋಳವೊಂದು ಕುಷ್ಟಗಿ ತಾಲೂಕಿನ ಟೆಂಗುಂಟಿ, ಕೆ.ಗೋನಾಳ, ಕೆ.ಬಸಾಪೂರು ಹಾಗೂ ಕೆ.ಹೂಸೂರು ಗ್ರಾಮಗಳಲ್ಲಿನ ಜಾನುವಾರುಗಳು ಸೇರಿದಂತೆ 20 ಜನರ ಮೇಲೆ ದಾಳಿ ಮೂಲಕ ತನ್ನ ಅಟ್ಟಹಾಸವನ್ನು ಮೆರೆದು, ರಕ್ತದ ಓಕುಳಿ ಆಡಿತ್ತು. ಅಲ್ಲದೆ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮೂಲಕ ರೌದ್ರ ಅವತಾರ ತಾಳಿತ್ತು. ಇಂತಹ ವಿಚಿತ್ರ ಘಟನೆಗಳಲ್ಲಿ ಮೊದಲು ತಿಳಿಸಲು ಹೊರಟಿರುವುದು ತನ್ನ ಮೂಲ ಮುಖದ ಕಪಾಳವನ್ನೆ ಕಳೆದುಕೊಂಡಿರುವ ಬಡ ಮಹಿಳೆಯ ಆರ್ಥನಾದವನ್ನು ತಿಳಿಯಪಡಿಸುವ ಸಣ್ಣ ಪ್ರಯತ್ನ ಪ್ರಿಯ ಓದುಗರೆ..!
     ಮನೆಯ ಮುಂಭಾಗದಲ್ಲಿ ಮಕ್ಕಳೊಂದಿಗೆ ಮಲಗಿದ ಮಹಿಳೆಯ ಮೇಲೆ ಏಕಾ ಏಕಿ ಎರಗಿದ ತೋಳವು ಮುಖ ಸೇರಿದಂತೆ ಇನ್ನಿತರ ಭಾಗದಲ್ಲಿ ತನ್ನ ಇಷ್ಟದಂತೆ ಕಚ್ಚಿ ಕೊಂಡಿದೆ. ತೋಳ ತನ್ನ ಹುಚ್ಚಾಟದಲ್ಲಿ ರಕ್ತವನ್ನೇ  ಹರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಹತ್ತು ವರ್ಷದ ಮಗನ ಸಾಹಸವನ್ನು ಇಲ್ಲಿ ಮೆಚ್ಚಲೇಬೇಕು. ತನ್ನ ಹಡೆದ ತಾಯಿ ಮೇಲೆ ದಾಳಿ ಮಾಡಿದ ತೋಳವನ್ನು ತನ್ನ ಶಕ್ತಿ ಮೀರಿ ಬಾಲಕ ಹಿಡಿದು ಬಿಸಾಡಿದ್ದು ಒಂದು ಸಾಹಸದ ಇತಿಹಾಸ.

ಕವಡೆ ಕಾಸಿನ ಪರಿಹಾರ : ದಾಳಿಗೆ ತುತ್ತಾಗಿ ಕುಷ್ಟಗಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಇಲಕಲ್ಲ ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆದು, ಮುಖ ಭಾಗದಲ್ಲಿಯೇ 5 ಕಡೆ ಶಸ್ತ್ರಚಿಕಿತ್ಸೆ ಮೂಲಕ ಅಂದಾಜು 5 ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಖರ್ಚು ಮಾಡಿಕೊಂಡಿರುವ ಬಡ ಕುಟುಂಬವು ಮಹಿಳೆಯ ಜೀವ ಉಳಿಸಿಕೊಳ್ಳಲು ಹೇಗೋ ಏನೋ ಸಾಲ-ಸೂಲಮಾಡಿಕೊಂಡು ಜೀವನ ಸಾಗಿಸಿದೆ. ಆದರೆ, ತೋಳದ ದಾಳಿಗೆ ತುತ್ತಾಗಿರುವ ಮಹಿಳೆಗೆ ನಿತ್ಯ ಒಂದಿಲ್ಲಾ ಒಂದು ಚಿಕಿತ್ಸೆಗಳು ಸಾಮಾನ್ಯವಾಗಿ ಬಿಟ್ಟಿವೆ. ಮೂಲ ಚಿಕಿತ್ಸೆ ಖರ್ಚು ಸೇರಿದಂತೆ ನಿತ್ಯದ ಖರ್ಚಿಗೆ ಕುಟುಂಬವು ಬೀದಿಗೆ ಬಂದಿದೆ. ಸರಕಾರದ ಪರಿಹಾರವನ್ನು ನೆಚ್ಚಿಕೊಂಡಿದ್ದ ಕುಟುಂಬಕ್ಕೆ ಕೇವಲ 64443=00 ರೂಪಾಯಿಗಳನ್ನು ಅರಣ್ಯ ಇಲಾಖೆ ಪರಿಹಾರ ನೀಡಿದ್ದು ಮಾತ್ರ ಬಡ ಕುಟುಂಬವನ್ನು ಮತ್ತಷ್ಟು ಖಿನ್ನತೆಗೆ ದೂಡಿದೆ. ಅರಣ್ಯ ಇಲಾಖೆ ನೀಡಿರುವ ‘ಪರಿಹಾರ’ ವು ಮಹಿಳೆಗೆ ತೋಳದಿಂದ ಆಗಿರುವ ಗಾಯಗಳಿಗೆ ಹಚ್ಚಿದ ಮುಲಾಮು ಖರ್ಚಿಗಿಂತ ಕಡಿಮೆ ಪ್ರಮಾಣದ್ದಾಗಿದೆ. ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬವು ಹಾತೋರಿಯುತ್ತಿದೆ. ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿರುವ ಬಡ ಕುಟುಂಬದ ನೆರವಿಗೆ ಸರಕಾರ ಮುಂದಾಗಬೇಕೆಂಬುದು ಇಡೀ ಕೆ.ಹೊಸೂರು ಗ್ರಾಮಸ್ಥರ ಒತ್ತಾಸೆಯಾಗಿದೆ..!!