ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಮನುಷ್ಯನ ಕಂಡರೆ ಮಾರುದ್ದ ಹಾರುವ ಮಂಗ ಬೈಕೇರಿ ಪ್ರಯಾಣಿಸಿದ ವೀಡಿಯೋ ಒಂದೆಡೆಯಾದರೆ, ಮುಂದೊಂದುದಿನ ನಾ ಆಹಾರವಾಗುತ್ತೇನೆ ಎಂದು ಅರಿಯದ ಮೇಕೆ ಅದೇ ಮನುಷ್ಯನ ಆಲಂಗಿಸುವ ವೀಡಿಯೋ ಸಧ್ಯ ಜಿಲ್ಲೆಯ ಕುಷ್ಟಗಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ವೈರಲ್ ಆಗಿದೆ.
ಕುಷ್ಟಗಿ ತಾಲೂಕು ಪಂಚಾಯಿತಿ ನಗರ ಮತ್ತು ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಎನ್.ಆರ್.ಎಲ್.ಎಂ. ವ್ಯವಸ್ಥಾಪಕ ಮಾದೇಗೌಡ ಪಾಟೀಲ್ ಅವರು, ಕೊಪ್ಪಳ ಗವಿ ಮಠದ ಜಾತ್ರೆಯಲ್ಲಿ ಉತ್ಪನ್ನಗಳ ವಸ್ತು ಪ್ರದರ್ಶನಕ್ಕೆ ತಾಲೂಕಿನ ಮೂಗನೂರು ಗ್ರಾಮದಿಂದ ಚಳಗೇರಿ ಮಾರ್ಗವಾಗಿ ಬೈಕ್ ಸವಾರಿ ಮಾಡಿಕೊಂಡು ತೆರಳುತಿದ್ದ ಸಂದರ್ಭದಲ್ಲಿ ಚಳಗೇರಿ ಕ್ರಾಸ್ ಮಾರ್ಗ ಮಧ್ಯೆ ಮಂಗವೊಂದು ಎದುರಾಗಿದೆ. ಆ ಸಂದರ್ಭದಲ್ಲಿ ಬೈಕ್ ನಿಲ್ಲಿಸಿದ ಮಾದೇಗೌಡರು’ ಎದುರುಗೊಂಡು ಬಂದ ಮಂಗಕ್ಕೆ ತನ್ನಲ್ಲಿದ್ದ ಚಾಕಲೇಟ್ ನೀಡಿದ್ದಾರೆ. ಬಳಿಕ ತನ್ನ ಬೈಕ್ ಏರುವಂತೆ ಹೇಳಿದ್ದಾರೆ, ಅಷ್ಟೇ ತಡ ಬೈಕ್ ಏರಿದ ಮಂಗ ಸುಮಾರು ಏಳೆಂಟು ಕಿ.ಮೀ. ಬೈಕಲ್ಲಿ ಕ್ರಮಿಸಿದೆ. ಬಳಿಕ ಮಾದೇಗೌಡರು, ತಳುವಗೇರಾ ಗ್ರಾಮದಲ್ಲಿ ಮಂಗಕ್ಕೆ ತಿನ್ನಲು ಬ್ರೆಡ್ ಅಥವಾ ಹಣ್ಣು ಕೊಡಿಸಲು ಮುಂದಾದಾಗ ಬೈಕ್ ಏರಿದ ಮಂಗ ಕಂಡು ಜನ ಜಮಾಯಿಸಿ ಹತ್ತಿರ ಬಂದಾಗ ಬೆದರಿದ ಭಂಗ ಕಾಲ್ಕಿತ್ತಿದೆ.
ಮತ್ತೊಂದೆಡೆ ಪಟ್ಟಣದ ಮಾರುತಿ ನಗರದಲ್ಲಿ ಕುರಿ, ಮೇಕೆ ಸಾಕಿರುವ ಟೈಲರ್ ಯಮನೂರಪ್ಪ ಕೋಮಾರಿ ಎಂಬುವರು ಮೇಕೆಯ ಮರಿಯೊಂದನ್ನು ಮೊದಲಿಗೆ ಬಾ ಎಂದು ಕರೆದು ಮುದ್ದಿಸಿದ್ದಾರೆ. ಬಳಿಕ ತನ್ನ ಬಳಿ ಬರಬಾರದು ಎಂದು ತಿರಸ್ಕರಿಸಿದ್ದಾರೆ. ಆದರೆ, ಮಾಲಿಕ ತಿರಸ್ಕರಿಸಿದಷ್ಟು ಮೇಕೆ ಮರಿ ಜಿಗಿದು ಮಾಲಿಕನನ್ನು ಆಲಂಗಿಸುತ್ತಿರುವ ಕುರಿತು ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ಲಾಗಿದೆ. ಮನುಷ್ಯರಷ್ಟೇ ಅರಿವು ಹೊಂದಿರುವ ಪ್ರಾಣಿಗಳು’ ಮನುಷ್ಯನ ಭಾಷೆಗೆ ಸ್ಪಂದಿಸಿದ ಗುಣ ಕಂಡು ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.