ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಕ್ರಾಸ್ ಬಳಿಯ ಉಗ್ರಾಣದಲ್ಲಿ 2ಲಕ್ಷ ರೂಪಾಯಿ ಮೌಲ್ಯದ 109 ಪಾಕೀಟ್ ಮೆಕ್ಕೆಜೋಳ ಲೂಟಿ ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗಜೇಂದ್ರಗಡ ರಸ್ತೆ ಹಿರೇನಂದಿಹಾಳ ಕ್ರಾಸ್ ಬಳಿ ಇರುವ ಕಪಿಲತೀರ್ಥ ತೋಟಗಾರಿಕಾ ರೈತ ಉತ್ಪಾದಕರ ಸಂಘಕ್ಕೆ ಸೇರಿದ ಉಗ್ರಾಣ ಇದಾಗಿದೆ.
ಸಾವಿರ ಜನ ಶೇರುದಾರರು ಹೊಂದಿರುವ ಈ ಸಂಘದ ಉಗ್ರಾಣದಲ್ಲಿ ಮೆಕ್ಕೆಜೋಳ ಬೀಜ ಸೇರಿದಂತೆ ರಸಗೊಬ್ಬರ, ಕ್ರಿಮಿ ಕೀಟನಾಶಕ ಔಷಧ, ತಾಡಪತ್ರಿ ಹಾಗೂ ರೈತೋಪಕರಣಗಳನ್ನು ಸಂಗ್ರಹಿಸಿಡಲಾಗಿತ್ತು. ಭಾನುವಾರ-ಸೋಮವಾರ ನಡುವಿನ ರಾತ್ರಿವೇಳೆ ಯಾರೋ ದರೋಡೆಕೋರರು ಆವರಣದ ಗೇಟ್ ಪತ್ತ ಮುರಿದು ಉಗ್ರಾಣದ ಹಿಂಬದಿಯ ಕಿಡಕಿ ಮುರಿದು ಉಗ್ರಾಣದೊಳಗಿನ ಸಿಸಿ ಕ್ಯಾಮೆರಾ ಸಮೇತ 65 ಕೆ.ಜಿ ತೂಕದ 109 ಮೆಕ್ಕೆಜೋಳ ಬೀಜದ ಪಾಕೀಟ್ ದೋಚಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್’ಐ ಮುದ್ದುರಂಗಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಶೋಧಕಾರ್ಯ ಆರಂಭಿಸಿದೆ.