ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕಕ್ಕೆ ಸ್ವಂತ ನಿವೇಶನ: ಸಂತಸ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಭವನ ನಿರ್ಮಾಣಕ್ಕೆ ಕೊಪ್ಪಳ ನಗರಸಭೆಯಿಂದ ಅಧಿಕೃತವಾಗಿ ನಗರದ ವಾರ್ಡ ನಂ. 20ರಲ್ಲಿ ನಿವೇಶನ ದೊರೆತ ಹಿನ್ನೆಲೆ ಜಿಲ್ಲೆಯಾದ್ಯಂತ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಬಹು ವರ್ಷಗಳ ಬೇಡಿಕೆಯಾಗಿದ್ದ ನಿವೇಶನದ ಕನಸು  ಜ.22-2024ರಂದು ಸಂಘದ ಹೆಸರಲ್ಲಿ ನಿವೇಶನ ನೋಂದಣಿಯಾಗಿ ನಗರಸಭೆಯಿಂದ ಫಾರ್ಮ್ ನಂ-03 ಲಭ್ಯವಾಗುವ ಮೂಲಕ ನನಸಾಗಿದೆ. ಸ್ವಂತ ನಿವೇಶನ ಪಡೆಯಲು ಹಿಂದಿನಿಂದ ಅನೇಕ ಹಿರಿಯರ ಹೋರಾಟ ಹಾಗೂ ಇಂದಿನ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು, ಹಿರಿಯರಾದ ಎಂ.ಸಾದಿಕ್ ಅಲಿ, ಹೆಚ್.ಎಸ್ ಹರೀಶ, ಜಿ.ಎಸ್. ಗೋನಾಳ, ಎನ್.ಎಂ ದೊಡ್ಡಮನಿ, ಹನುಮಂತ ಹಳ್ಳಿಕೇರಿ, ಜಿಲ್ಲಾ ಖಜಾಂಚಿ ರಾಜು.ಬಿ.ಆರ್ ಸರ್., ಜಿಲ್ಲಾ ಉಪಾಧ್ಯಕ್ಷ ರುದ್ರಗೌಡ ಪಾಟೀಲ್, ವೆಂಕಟೇಶ ಕುಲಕರ್ಣಿ‌, ವೀರಣ್ಣ ಕಳ್ಳಿಮನಿ, ಸಿರಾಜ್ ಬಿಸರಳ್ಳಿ, ರಾಜಾಭಕ್ಷಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕೇಂದ್ರ ಸ್ಥಾನದ ಎಲ್ಲಾ ಸದಸ್ಯರ ಶ್ರಮದ ಫಲವಾಗಿ ನಿವೇಶನ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ವೈ., ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಜಿಲ್ಲಾ ಘಟಕದ ಪದಗ್ರಹಣದ ವೇಳೆ ಕೊಪ್ಪಳ ಜಿಲ್ಲಾ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕು ಘಟಕಗಳ ಅನೇಕ ಹಿರಿಯರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಲ್ಲಿ ಒತ್ತಡ ಹಾಕಿದ ಹಿನ್ನೆಲೆ ₹15 ಲಕ್ಷ ನಿವೇಶನಕ್ಕಾಗಿ ಅನುದಾನ ಪಡೆಯಲಾಗಿತ್ತು. ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಧಿಕೃತವಾಗಿ ನಿವೇಶನವನ್ನು ಪಡೆದುಕೊಳ್ಳಲಾಗಿದೆ. ಹಿರಿಯರ ಸಲಹೆಯಂತೆ ಕೆಲವೇ ದಿನಗಳಲ್ಲಿ ಸಂಘದ ಕಟ್ಟಡ ಆರಂಭ ಪಡೆದುಕೊಳ್ಳಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ವೈ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೆ ಸಂತಸ ಹಂಚಿಕೊಂಡಿದ್ದಾರೆ.