ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದೆ.
ಗ್ರಾಮದ ನಿವಾಸಿ ಎಚ್ಚರಪ್ಪ ಮಾನಪ್ಪ ಬಡಿಗೇರ ಎಂಬುವರಿಗೆ ಸೇರಿದ ಮಡಿಗೆ ಮನೆಯಿದಾಗಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಸ್ವಿಚ್ ಬೋರ್ಡಿನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹರಡಿಕೊಂಡಿದೆ ಎನ್ನಲಾಗಿದೆ. ಮನೆಯಲ್ಲಿನ ಬೆಳ್ಳಿ- ಬಂಗಾರದ ಆಭರಣಗಳು, ಬಟ್ಟೆಗಳು, ದವಸ ಧಾನ್ಯಗಳು, ಅಡುಗೆ ಸಾಮಗ್ರಿ ಅಲ್ಲದೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಶಾಮಿಯಾನ ಪೆಂಡಾಲ್, ಪ್ಲಾಸ್ಟಿಕ್ ಚೇರು ಇತರೆ ಸಾಮಗ್ರಿಗಳು ಬೆಂಕಿಗೆ ಸಂಪೂರ್ಣ ಸುಟ್ಟಿವೆ.
ಘಟನೆ ವಿಷಯ ತಿಳಿದ ಸ್ಥಳಕ್ಕೆ ಧಾವಿಸಿದ ತಾಲೂಕಿನ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ರಾಜು ಪರಸಪ್ಪ, ಪ್ರಮುಖ ಅಗ್ನಿಶಾಮಕ ಅಧಿಕಾರಿ ನಾಗಪ್ಪ ಗಂಗನಾಳ, ಸಿಬ್ಬಂದಿ ಶಾಮೀದಸಾಬ, ಶರಣಪ್ಪ ಮಾಲಿಪಾಟೀಲ, ಶರಣಗೌಡ ಮಾಲಿಪಾಟೀಲ, ಅಶೋಕಕುಮಾರ ಜಿ. ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಒಂದು ಗ್ಯಾಸ್ ಸಿಲಿಂಡರ್ ಬ್ಲಾಸ್ಟಾಗಿದೆ. ಮತ್ತೊಂದು ಸಿಲೇಂಡರ್ ಸೋರಿಕೆಯಾಗುತ್ತಿದ್ದನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಿದ್ದಾರೆ. ಆಕಸ್ಮಿಕ ಬೆಂಕಿ ಅನಾಹುತ ಘಟನೆಯಲ್ಲಿ ಅಂದಾಜು 10ರಿಂದ 15 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.