ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದ ಮುತ್ತಮ್ಮ ಗಂಡ ಕಾಳಪ್ಪ ಕಮ್ಮಾರ ಎಂಬುವರಿಗೆ ಸೇರಿದ ಮಡಿಗೆ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಯುವಕನೋರ್ವ ಸಿಲೇಂಡರ್ ಗ್ಯಾಸ್ ಮನೆಗೆ ಕೊಂಡೊಯ್ದು ಕನೆಕ್ಷನ್ ಕೊಡುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಆ ಸಮಯದಲ್ಲಿ ಅಡುಗೆ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪದಿಂದ ದಿಢೀರನೆ ಬೆಂಕಿ ಹತ್ತಿಕೊಂಡಿದ್ದು, ಯುವಕನ ಮೊಗಕ್ಕೆ ಬೆಂಕಿಯ ಬಿಸಿ ತಾಗಿದ್ದು, ಕೂಡಲೆ ಮನೆಯಲ್ಲಿದ್ದ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಹೊರಗಡೆ ಆಗಮಿಸಿ ಪ್ರಾಣ ರಕ್ಷಣೆ ಮಾಡಿದ್ದಾನೆ ಎನ್ನಲಾಗಿದ್ದು, ಮನೆಯಲ್ಲಿನ ಬೆಳ್ಳಿ- ಬಂಗಾರದ ಆಭರಣಗಳು, ಬಟ್ಟೆಗಳು, ದವಸ ಧಾನ್ಯಗಳು, ಅಡುಗೆ ಸಾಮಗ್ರಿಗಳು ಬೆಂಕಿಗೆ ಸಂಪೂರ್ಣ ಸುಟ್ಟಿವೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ತಾಲೂಕಿನ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ರಾಜು ಪರಸಪ್ಪ, ಪ್ರಮುಖ ಅಗ್ನಿಶಾಮಕ ಅಧಿಕಾರಿ ನಾಗಪ್ಪ ಗಂಗನಾಳ, ಸಿಬ್ಬಂದಿ ಶಾಮೀದಸಾಬ, ಶರಣಪ್ಪ ಮಾಲಿಪಾಟೀಲ, ಶರಣಗೌಡ ಮಾಲಿಪಾಟೀಲ, ಅಶೋಕಕುಮಾರ ಜಿ., ವಿಶಾಲ ರಾಠೋಡ, ರಾಜು ಚೌಹಾಣ್, ಬಸವರಾಜ ವರ್ಕೇರಿ ಮನೆಯಲ್ಲಿ ಸೋರಿಕೆಯಾಗುತ್ತಿದ್ದ ಸಿಲೇಂಡರ್ ಅನ್ನು ಜೀವದ ಹಂಗುತೊರೆದು ಹೊರತರುವ ಮೂಲಕ ಮುಂದೆ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಿದ್ದಾರೆ.
ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತ ಘಟನೆಯಲ್ಲಿ ಅಂದಾಜು 1.5 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.