ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬೆಂಕಿ ತಗುಲಿ ಮನೆ ಕಳೆದುಕೊಂಡ ಕುಟುಂಬ ಅತಂತ್ರದಲ್ಲಿರುವದನ್ನು ಅರಿತ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.
ಗ್ರಾಮದ ನಿವಾಸಿ ಎಚ್ಚರಪ್ಪ ಮಾನಪ್ಪ ಬಡಿಗೇರ ಎಂಬುವರ ಮಡಿಗೆ ಮನೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ವಿಚ್ ಬೋರ್ಡಿನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹರಡಿಕೊಂಡು ಮನೆಯಲ್ಲಿನ ಬೆಳ್ಳಿ- ಬಂಗಾರದ ಆಭರಣಗಳು, ಬಟ್ಟೆಗಳು, ದವಸ ಧಾನ್ಯಗಳು, ಅಡುಗೆ ಸಾಮಗ್ರಿ ಅಲ್ಲದೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಶಾಮಿಯಾನ ಪೆಂಡಾಲ್, ಪ್ಲಾಸ್ಟಿಕ್ ಚೇರು ಇತರೆ ಸಾಮಗ್ರಿಗಳು ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಅಂದಾಜು 10ರಿಂದ 15 ಲಕ್ಷ ರೂಪಾಯಿ ಹಾನಿಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಸಂತ್ರಸ್ತ ಕುಟುಂಬಕ್ಕೆ ವಯಕ್ತಿಕವಾಗಿ 10 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿವುದಾಗಿ ಭರವಸೆ ನೀಡಿದ್ದಾರೆ.