ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಪಟ್ಟಣದಲ್ಲಿ ಉದ್ಯಮಿಯೊಬ್ಬರು ಸದ್ದಿಲ್ಲದೆ ಗಿಡಗಳ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ ಗಿಡಗಳಿಗೂ ನೀರುಣಿಸುವ ಮೂಲಕ ಪರಿಸರ ಕಾಳಜಿ ಮಾಡುವ ಕೆಲಸ ಕೈಗೊಂಡಿದ್ದಾರೆ. ಬೇಸಿಗೆ ಆರಂಭವಾಗಿದ್ದು, ರಸ್ತೆ ಬದಿಗಳಲ್ಲಿ ನೆಡಲಾದ ಗಿಡಗಳು ಒಣಗಲಾರಂಭಿಸಿರುವುದನ್ನು ಎಚ್ಚೆತ್ತು ಬೆಳಗಿನ ಜಾವ ರಸ್ತೆ ಬದಿ ಬೆಳೆದಿರುವ ಗಿಡಗಳಿಗೆ ನೀರುಣಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.
ಪಟ್ಟಣದ ಎನ್.ಸಿ.ಹೆಚ್. ಮ್ಯಾರೇಜ್ ಪ್ಯಾಲೇಸ್ ಮಾಲಿಕ ನಾಗಪ್ಪ ಚನ್ನಬಸಪ್ಪ ಹೊಸವಕ್ಕಲ್ ಎಂಬುವರು ಇಂದು ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ರಸ್ತೆ ಬದಿ ಹಾಗೂ ವಿಭಜಕಗಳಲ್ಲಿನ ತರಹೇವಾರಿ ಗಿಡಗಳಿಗೆ ನೀರುಣಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು. ಸ್ಥಳೀಯ ಪುರಸಭೆಯವರು ತೋರಬೇಕಾದ ಕಾಳಜಿ ಇವರು ತೋರುತ್ತಿರುವುದನ್ನು ವಿಚಾರಿಸಿದಾಗ, ಕಳೆದ ಎರಡು ವರ್ಷಗಳಿಂದ ಕೆಲ ಉದ್ಯಾನವನಗಳಲ್ಲಿ ಬೆಳೆಸಲಾದ ಗಿಡಗಳಿಗೆ ನೀರಿನ ದಾಹ ತೀರಿಸುತ್ತಿರುವುದಾಗಿ ಹೇಳಿದರು.
ಮೂರು ತಿಂಗಳ ಹಿಂದೆ ಪರಿಸರ ಹಾಗೂ ಸಾಮಾಜಿಕ ಕಳಕಳಿಯುಳ್ಳ ಗೆಳೆಯರ ಬಳಗದ ಪತ್ರಕರ್ತ ಮಂಜುನಾಥ ಮಹಲಿಂಗಪುರ ಹಾಗೂ ಪಕ್ಷಿಪ್ರೇಮಿ ಪಾಂಡುರಂಗ ಆಶ್ರೀತ್ ಅವರು ನಗರ ಹಸಿರೀಕರಣಗೊಳಿಸುವ ಉದ್ಧೇಶ ಹೊಂದಿ ಸೋಲಾರ್ ಕಂಪನಿಗಳ ಸಹಕಾರದಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಮೂರ್ನಾಲ್ಕು ತಿಂಗಳ ಹಿಂದೆ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಪುರಸಭೆ ಟಿಪ್ಪುಸುಲ್ತಾನ್ ವೃತ್ತದ ವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಬಸ್ಟ್ಯಾಂಡ್ ರಸ್ತೆ, ಮಲ್ಲಯ್ಯ ವೃತ್ತ, ಮುರಡಿ ಭೀಮಜ್ಜ ವೃತ್ತದ ವರೆಗಿನ ವಿಭಜಕ ರಸ್ತೆಯ ಬದಿಗಳಲ್ಲಿ ಹಾಗೂ ವಿಭಜಕಗಳಲ್ಲಿ ಟ್ರಿಗಾರ್ಡ್ ರಕ್ಷಾ ಕವಚವುಳ್ಳ ತರಹೇವಾರಿ ಸಸಿಗಳನ್ನು ನೆಟ್ಟಿದ್ದರು. ಸಧ್ಯ ಸಸಿಗಳು ಗಿಡಗಳಾಗಿ ಚೈತನ್ಯ ಪಡೆಯಲು ನಾಗಪ್ಪ ಹೊಸವಕ್ಕಲ್ ಅವರು
ಬೆಳಗಿನ ಜಾವ ಹಾಗೂ ಸಂಜೆ ಪ್ರತಿ ಎರಡು ದಿನಗಳಿಗೊಮ್ಮೆ ತಮ್ಮದೇ ಟ್ರ್ಯಾಕ್ಟರ್ ಬಳಸಿಕೊಂಡು ಟ್ಯಾಂಕರ್ ಮುಖಾಂತರ ನೀರುಣಿಸುತ್ತಿದ್ದಾರೆ. ನಗರ ಹಸಿರೀಕರಣಕ್ಕೆ ಮುಂದಾಗಿರುವ ಪರಿಸರ ಪ್ರೇಮಿ ಗೆಳೆಯರ ಬಳಗಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪಟ್ಟಣ ನಗರ ಪ್ರದೇಶಗಳಲ್ಲಿ ಎಲ್ಲರೂ ನೆರಳು ಬಯಸಿ ಗಿಡಗಳನ್ನು ಆಶ್ರಯಿಸುತ್ತಾರೆ. ಆದರೆ, ಅವುಗಳ ಪೋಷಣೆಗೆ ಮುಂದಾಗುವುದಿಲ್ಲ. ಯಾರೋ ಗಿಡಗಳನ್ನು ನೆಟ್ಟು ಹೋಗಿದ್ದಾರೆ ಎನ್ನುವ ತಾಚಾರ ಮನೋಭಾವವೇ ಹೆಚ್ಚು. ಇಂತವರ ನಡುವೆಯೂ ಸದ್ದಿಲ್ಲದೆ ತರಹೇವಾರಿ ಗಿಡಗಳ ದಾಹ ತೀರಿಸಲು ಮುಂದಾಗಿರುವ ಇವರ ಪರಿಸರ ಕಾಳಜಿಗೆ ನಮ್ಮ ಕಡೆಯಿಂದ ಒಂದು ಹ್ಯಾಟ್ಸಾಪ್ ..