ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಮಹಾ ರಥೋತ್ಸವ ಶನಿವಾರ ಸಂಜೆ ಭಕ್ತರ ಜಯಘೋಷಣೆಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಶ್ರೀ ಬುತ್ತಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಹಾಲಕೆರೆ ಸಂಸ್ಥಾನಮಠದ ಶ್ರೀಮುಪ್ಪಿನ ಬಸವಲಿಂಗ ಸ್ವಾಮೀಜಿ, ಸ್ಥಳೀಯ ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿಧಾನಸಭಾ ವಿರೋಧ ಪಕ್ಷದ ಮುಖ್ಯಸಚೇತಕ ಹಾಗೂ ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ್ ಮತ್ತಿತರ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಹಾಗೂ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವಜೋಡಿಗಳು ತೇರಿಗೆ ಉತ್ತತ್ತಿ ಸಮರ್ಪಿಸಿ ರಥೋತ್ಸವ ಕಣ್ತುಂಬಿಕೊಂಡರು.
ಆತಂಕ ಸೃಷ್ಟಿ: ದೇವಸ್ಥಾನದ ರಥ ಬೀದಿಯ ಜಾಗವನ್ನು ಮನೋರಂಜನೆ ಸೇರಿ ಇತರೆ ಜಾತ್ರಾ ಸಾಮಾಗ್ರಿ ಮಾರಾಟ ಟೆಂಟ್’ಗಳು ಆಕ್ರಮಿಸಿಕೊಂಡಿದ್ದವು. ಜೊತೆಗೆ ರಥ ಬೀದಿ ಕೂಡ ಸಮತಟ್ಟಾಗಿರಲಿಲ್ಲ. ರಥೋತ್ಸವ ಕಣ್ತುಂಬಿಕೊಳ್ಳಲು ಬಂದ ಭಕ್ತರು ರಥ ಬೀದಿಯಲ್ಲೇ ನಿಲ್ಲಬೇಕಾಯಿತು. ರಥೋತ್ಸವ ಆರಂಭಗೊಂಡ ಕೆಲ ನಿಮಿಷಗಳಲ್ಲಿ ರಥದ ಗಾಲಿಗಳು ಎಡ ಬದಿಗೆ ತಿರುಗಿದವು. ಆಗ ಪಕ್ಕಕ್ಕೆ ಸರಿಯಲು ಜಾಗೆಯಿಲ್ಲದೇ ಮಕ್ಕಳು, ಮಹಿಳೆಯರು ಸೇರಿದಂತೆ ಹಲವರಲ್ಲಿ ಆತಂಕ ಸೃಷ್ಟಿಯಾಗಿ ಗಾಬರಿಯಿಂದ ಚೀರಿದರು. ಆಗ ಪೊಲೀಸರು ಹಾಗೂ ಕೆಲ ಯುವಕರ ಸಹಕಾರದಿಂದ ರಥವನ್ನು ಸರಿ ದಾರಿಗೆ ತರಲಾಯಿತು. ದೇವಸ್ಥಾನದ ಜಾತ್ರಾ ಮಹೋತ್ಸವ ಕಮೀಟಿಯವರು ಜಾತ್ರೆಯ ಮುನ್ನ ದಿನಗಳಲ್ಲಿ ರಥ ಬೀದಿ ಸಮತಟ್ಟಾಗಿರುವಂತೆ ಹಾಗೂ ಭಕ್ತರು ಬೀದಿ ಬದಿಯಲ್ಲಿ ಸುರಕ್ಷಿತವಾಗಿ ನಿಂತು ತೇರು ನೋಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮುಂಬರುವ ವರ್ಷಗಳಲ್ಲಿ ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.