ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪುರಸಭೆಯಲ್ಲಿ ಬಹುತೇಕ ಸಿಬ್ಬಂದಿ ಕೊರತೆಯಿದ್ದು, ಕಡತಗಳು ವಿಲೇವಾರಿ ಯಾಗದ ಹಿನ್ನೆಲೆ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬುಧವಾರ ಮದ್ಯಾಹ್ನ 3.30ರ ಸುಮಾರಿಗೆ ಕಂಡುಬಂತು.
23 ವಾರ್ಡಗಳನ್ನು ಹೊಂದಿರುವ ಈ ಪುರಸಭೆಯಲ್ಲಿ ಮುಖ್ಯಾಧಿಕಾರಿ ಸೇರಿ ಮುಖ್ಯ ಲೆಕ್ಕ ಪರಿಶೋಧಕ, ಪರಿಸರ ಅಭಿಯಂತರರು, ಕಚೇರಿ ಅಭಿಯಂತರರು, ಸಮುದಾಯ ಸಂಘಟನಾಧಿಕಾರಿ, ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಪ್ರಥಮ, ದ್ವಿತೀಯ ದರ್ಜೆ ಸಹಾಯಕರು, ಕರವಸೂಲಿ ಗಾರರು ಸೇರಿ ಪೌರಕಾರ್ಮಿಕರು, ವಾಲ್‌ಮೆನ್. ಇತರೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಆದರೆ, ಕಳೆದ ಹದಿನೈದು ದಿನಗಳ ಹಿಂದೆ ಫಾರ್ಮ್ ನಂಬರ್-03 ವಿತರಣೆಯಲ್ಲಿ ಲೋಪ ಹಿನ್ನೆಲೆ ಕರವಸೂಲಿ ಗಾರ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ, ದ್ವಿತೀಯ ದರ್ಜೆ ಸಹಾಯಕ ಈ ನಾಲ್ವರು ಅಮಾನತ್ತುಗೊಂಡಿದ್ದಾರೆ. ಖಾಲಿ ಉಳಿದ ಆ ಹುದ್ದೆಗಳಿಗೆ ಯಾರೂ ನಿಯೋಜನೆಗೊಳ್ಳದ ಪರಿಣಾಮ ಆನ್ಲೈನ್ ಕಡತಗಳು ವಿಲೇವಾರಿಯಾಗದೇ ಹಾಗೇ ಉಳಿದುಕೊಂಡಿವೆ. ಕಟ್ಟಡ ಪರವಾನಗಿ, ಖಾತಾ ಉತಾರ, ಕರ ಸಂದಾಯ, ಮೊಟೇಶನ್ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಪ್ರತಿನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಈ ಕುರಿತು ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ಕಳೆದ ನಾಲ್ಕೈದು ದಿನಗಳ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಖಾಲಿ ಉಳಿದಿರುವ ಹುದ್ದೆಗಳಿಗೆ ಯಾರನ್ನಾದರು ಜಿಲ್ಲಾಕೇಂದ್ರದಿಂದ ನಿಯೋಜನೆ ಮಾಡಿ ಎಂದು ಕೋರಿದ್ದಾರೆ. ಆದರೆ, ಈವರೆಗೂ ಯಾರೂ ನಿಯೋಜನೆಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇತ್ತ ಆಡಳಿತ ಮಂಡಳಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಅನುಮತಿಸದ ಹಿನ್ನೆಲೆ ಆಡಳಿತಮಂಡಳಿ ಇದ್ದು ಇಲ್ಲದಂತಾಗಿದೆ. ಈ ಕುರಿತು ಮಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆ ಸದಸ್ಯರು, ವಾರ್ಡಿನ ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಅಲೆಯುತಿದ್ದು, ಕೆಲಸವಾಗದ ಹಿನ್ನೆಲೆ ತಮಗೆ ಛೀಮಾರಿ ಹಾಕುತಿದ್ದಾರೆ. ಪುರಸಭೆಗೆ ಪರಿಸರ ಅಭಿಯಂತರರು, ಕಚೇರಿ ಅಭಿಯಂತರರು ಖಾಯಂ ನೌಕರರಿಲ್ಲ. ಎಷ್ಟೋ ಸಿಬ್ಬಂದಿಗ ಕೊರತೆಯಿದೆ. ಸಧ್ಯ ನಾಲ್ವರು ಅಮಾನತ್ತುಗೊಂಡ ಹಿನ್ನೆಲೆ ಕೆಲಸ ಮಾಡುವವರಿಲ್ಲದೇ ಪುರಸಭೆ ಖಾಲಿಯಿದ್ದು, ಬಿಕೋ ಎನ್ನುವಂತಿದೆ. ಈ ಕುರಿತು ಅನೇಕಬಾರಿ ಎಲ್ಲಾ ಸದಸ್ಯರ ನಿಯೋಗ ಜಿಲ್ಲಾ ಕೇಂದ್ರಕ್ಕೆ ಹೋಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿಗಳಿಗೆ ಸಿಬ್ಬಂದಿ ನಿಯೋಜಿಸುವಂತೆ ಕೋರಿಕೊಂಡರು ಪ್ರಯೋಜನವಾಗುತ್ತಿಲ್ಲ ಎಂದು ಮಾಧ್ಯಮ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಬರುವ ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಅಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಹೊರ ಜಿಲ್ಲೆಗಳಿಗೆ ನಿಯೋಜನೆಗೊಂಡಿದ್ದಾರೆ. ಅಲ್ಲಿಂದ ವರ್ಗಾವಣೆಗೊಂಡು ಹೊಸಬರು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ. ಸ್ಥಳೀಯ ಸಂಸ್ಥೆಯ ಸಮಸ್ಯೆಗೆ ಚುನಾವಣೆ ಮುಗಿಯುವವರೆಗೂ ಪರಿಹಾರ ಸಿಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಜಿಲ್ಲಾಧಿಕಾರಿಗಳು ಎಚ್ಚೆತ್ತು ಕುಷ್ಟಗಿ ಪುರಸಭೆಗೆ ತಾತ್ಕಾಲಿಕ ಸಿಬ್ಬಂದಿ ನಿಯೋಜನೆಗೆ ಕ್ರಮಕೈಗೊಳ್ಳಬೇಕಿದೆ.