ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ 2023-24ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಲಾಟರಿ ಮೂಲಕ ಆಯ್ಕೆಯಾದ ಕೃಷಿ ಹೊಂಡ ಹಾಗೂ ತಂತಿ ಬೇಲಿ ನಿರ್ಮಾಣ ಕಾಮಗಾರಿಗಳ ಸ್ಥಳಕ್ಕೆ ಮಂಗಳವಾರ ಸಂಜೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ತಾವರಗೇರಾ, ನಂದಾಪೂರು, ಜುಮಲಾಪೂರು ಸೇರಿದಂತೆ ವಿವಿಧ ಗ್ರಾಮಗಳ ಸೀಮಾ ವ್ಯಾಪ್ತಿಯಲ್ಲಿ ಆಯ್ಕೆಯಾದ 8 ಫಲಾನುಭವಿಗಳು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳ ಸ್ಥಳಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರಲಿ ಹಾಗೂ ರೈತ ಸಂಪರ್ಕ ಅಧಿಕಾರಿ ಆಶಾ ಸಿಬ್ಬಂದಿ ರೀಟಾ, ವೀರೇಶ, ಹೇಮಣ್ಣ ಭೇಟಿ ನೀಡಿ 6 ಕೃಷಿ ಹೊಂಡಗಳ ಕಾಮಗಾರಿಯ ಗುಣಮಟ್ಟತೆ ಪರಿಶೀಲಿಸಿದರು.
ತಾವರಗೇರಾ ಸೀಮಾದ ರೈತ ದೊಡ್ಡಪ್ಪ ಅಯ್ಯಪ್ಪ ಚಿಟ್ಟೆ ಎಂಬುವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡ ಹಾಗೂ ತಂತಿ ಬೇಲಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಂದು ಹೊಂಡಗಳ ಸುತ್ತಲೂ ತಂತಿ ಬೇಲಿ ಅಳವಡಿಸುವುದರಿಂದ ಜನ ಜಾನುವಾರು, ಪ್ರಾಣಿಗಳ ಜೀವ ರಕ್ಷಣೆಯಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಅವಕಾಶ ನೀಡಲಾಗಿದ್ದು, ಫಲಾನುಭವಿಗಳು ಯೋಜನೆಯ ನಿಯಮದಂತೆ ಕೃಷಿ ಹೊಂಡ ಹಾಗೂ ತಂತಿ ಬೇಲಿ ನಿರ್ಮಿಸಿಕೊಂಡು ಯೋಜನೆಯ ಲಾಭ ಪಡೆಯಬೇಕು. ಕೃಷಿ ಹೊಂಡ ಕಾಮಗಾರಿ ಗುಣಮಟ್ಟತೆ ಕಾಪಾಡಿಕೊಂಡ ರೈತರ ಖಾತೆಗೆ ನೇರವಾಗಿ ಹಣ ಜಮವಾಗಲಿದೆ ಎಂದು ಸ್ಥಳದಲ್ಲಿದ್ದ ಫಲಾನುಭವಿಗಳಿಗೆ ಅಧಿಕಾರಿಗಳು ತಿಳಿಸಿದರು.
ಈ ಕುರಿತು ಮಾದ್ಯಮಕ್ಕೆ ಪೋನ್ ಕರೆ ಮೂಲಕ ಮಾಹಿತಿ ನೀಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರಲಿ ಅವರು, ಕುಷ್ಟಗಿ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು 70 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಹನುಮನಾಳ ಮತ್ತು ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ನಿರ್ಮಾಣಗೊಂಡ ಹಾಗೂ ಪ್ರಗತಿ ಹಂತದ ಕೃಷಿ ಹೊಂಡ ಹಾಗೂ ತಂತಿ ಬೇಲಿ, ಬದು ನಿರ್ಮಾಣ ಮತ್ತು ಪೂರಕ ಘಟಕಗಳ ಕಾಮಗಾರಿಗಳನ್ನು ಹಂತ ಹಂತವಾಗಿ ವೀಕ್ಷಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.