ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಆರಾಧ್ಯ ದೈವ ದೋಟಿಹಾಳ ಶ್ರೀ ಅವಧೂತ ಶುಕಮುನಿಸ್ವಾಮಿ ಮಹಾರಥೋತ್ಸವವು ಭಾನುವಾರ ಸಂಜೆ 6.30ರ ಸುಮಾರಿಗೆ ಅಸಂಖ್ಯಾತ ಭಕ್ತ ಸಾಗರ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀ ಶುಕಮುನಿ ಸ್ವಾಮಿ ಮೂರ್ತಿಗೆ ಅಭಿಷೇಕ, ಬಿಲ್ವ, ಪುಷ್ಪಾರ್ಚನೆ, ಹೋಮ ಹವನ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆವು. ಕಳೆದೊಂದು ವಾರದಿಂದ ಶ್ರೀ ಶುಖಮುನಿ ಸ್ವಾಮಿ ದೇವಸ್ಥಾನದ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಇಂದು ಸಂಜೆ ದೇವಸ್ಥಾನದಿಂದ ರಥಬೀದಿಗೆ ಆಗಮಿಸಿದ ಪಲ್ಲಕ್ಕಿ ಶ್ರೀ ಶುಖಮುನಿ ಸ್ವಾಮಿ ಉತ್ಸವ ಮೂರ್ತಿ ಇರಿಸಿದ ತೇರಿಗೆ ಪ್ರದಕ್ಷಿಣೆ ಹಾಕುವ ಮೂಲಕ ಪಾದಗಟ್ಟಿಗೆ ತಲುಪಿ ಮರಳಿದ ಬಳಿಕ ಮಹಾರಥೋತ್ಸವಕ್ಕೆ ಚಾಲನೆ ದೊರೆಯಿತು.
ಈ ವೇಳೆ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ್, ತಹಸೀಲ್ದಾರ್ ರವಿ ಎಸ್. ಅಂಗಡಿ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಮಹೇಶ, ತಾ.ಪಂ., ಗ್ರಾ.ಪಂ. ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
ರಥಬೀದಿಯತ್ತ ಸಾಗಿದ ಶುಕಮುನಿ ತಾತನ ತೇರಿಗೆ ದೋಟಿಹಾಳ ವ ಕೇಸೂರು ಅವಳಿ ಗ್ರಾಮಗಳ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಂದ ಹಾಗೂ ಕುಷ್ಟಗಿ ಸೇರಿದಂತೆ ಪಕ್ಕದ ಇಳಕಲ್ ಹಾಗೂ ಹೊರ ಜಿಲ್ಲೆ, ಹೊರರಾಜ್ಯದಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಹಾಗೂ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವ ಜೋಡಿಗಳು ಉತ್ತತ್ತಿ ಸಮರ್ಪಿಸಿ ಮಹಾ ರಥೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.