ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಲೋಕಸಭಾ ಚುನಾವಣೆ ನಡೆಯುತ್ತಿರುವದರಿಂದ ಕೆಲವು ಪಟ್ಟಭದ್ರ ಹಿತಾಸಕ್ತ ವ್ಯಕ್ತಿಗಳು ಹೆಚ್.ಕೆ.ಪಾಟೀಲರು ಜನವರಿ 2024ರಲ್ಲಿ ಬರೆದಿರುವ ಪತ್ರದ ಕುರಿತು ಜನರಲ್ಲಿ ಗೊಂದಲ ಉಂಟುಮಾಡುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಕೆಪಿಸಿಸಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಹೇಳಿದ್ದಾರೆ.
ಈ ಕುರಿತು ಭಾನುವಾರ ಮಾಧ್ಯಮಕ್ಕೆ ನೀಡಿರುವ ಮಾಹಿತಿಯಲ್ಲಿ ಅವರು ತಿಳಿಸಿದ್ದಿಷ್ಟು. ಹೆಚ್.ಕೆ.ಪಾಟೀಲರು 371ಜೆ ಅನುಷ್ಠಾನದಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡುವದನ್ನು ವಿರೋಧಿಸಿ ಸಿಎಂಗೆ ಬರೆದಿದ್ದಾರೆ ಎನ್ನಲಾದ ಒಂದು ಪತ್ರವು ಕಲ್ಯಾಣ ಕರ್ನಾಟಕದ ಜನರಲ್ಲಿ ಆತಂಕ ಉಂಟುಮಾಡಿರುವದು ಸರಿಯಷ್ಟೇ? ಈ ವಿಷಯದ ಕುರಿತು ಈಗಾಗಲೇ ಮುಖ್ಯ ಮಂತ್ರಿಗಳ ಗಮನಕ್ಕೆ ನಾನೇ ಖುದ್ದಾಗಿಪತ್ರ ಬರೆದು ಹೆಚ್.ಕೆ.ಪಾಟೀಲರು ಬರೆದ ಪತ್ರದ ಮೇಲೆ ಯಾವುದೇ ಕ್ರಮ ಜರುಗಿಸದಂತೆ ಕೋರಿದ್ದೆ. ಮನವಿಗೆ ಸ್ಪಂದಿಸಿದ ಸಿಎಂ ಮಾರ್ಚ 2024 ರಲ್ಲಿ ಒಂದೇ ತಿಂಗಳಲ್ಲಿ ವಿವಿಧ ಇಲಾಖೆಗಳ ಸುಮಾರು 17 ನೇಮಕಾತಿ ಅಧಿಸೂಚನೆಗಳು ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಾವಿರಾರು ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಲಾಗಿತು. ಆದರೆ, ಲೋಕಸಭಾ ಚುನಾವಣೆ ನಡೆಯುತ್ತಿರುವದರಿಂದ ಕೆಲವು ಪಟ್ಟಭದ್ರ ಹಿತಾಸಕ್ತ ವ್ಯಕ್ತಿಗಳು ಹೆಚ್.ಕೆ.ಪಾಟೀಲರು ಜನವರಿ ತಿಂಗಳಲ್ಲಿ ಬರೆದಿರುವ ಪತ್ರದ ಕುರಿತು ಜನರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. 371ಜೆ ಅನುಷ್ಠಾನ ಮಾಡುವದು ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು, ಅದನ್ನು ನಾವು ಚಾಚು ತಪ್ಪದೇ ಪಾಲಿಸುತ್ತೇವೆ. ಯಾರೂ ಸಹ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು ಸ್ಪಷ್ಟಪಡಿಸಿದ್ದಾರೆ.