ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಗದಗದಲ್ಲಿ ಒಂದೇ ಕುಟುಂಬದ ನಾಲ್ವರು ಮತ್ತು ಹುಬ್ಬಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿಯ ಭೀಕರ ಹತ್ಯೆ ಪ್ರಕರಣ ಖಂಡಿಸಿ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಕೆ. ಸಮಾಜದವರು ಶನಿವಾರ ಮದ್ಯಾಹ್ನ ಪ್ರತಿಭಟಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಸಮಾವೇಶಗೊಂಡ ಎಸ್.ಎಸ್.ಕೆ. ಸಮಾಜದವರು ಹತ್ಯೆಗೈದ ಅಗಂತುಕರಿಗೆ ಘೋರ ಶಿಕ್ಷೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್. ಎಸ್.ಕೆ. ಸಮಾಜದ ತಾಲೂಕಾಧ್ಯಕ್ಷ ರವೀಂದ್ರ ಬಾಕಳೆ ಅವರು ಮಾತನಾಡಿ, ಗದಗ ನಗರ ಸಭೆಯ ಉಪಾಧ್ಯಕ್ಷ ಸುನಂದಾ ಬಾಬು ಬಾಕಳೆ ಅವರ ನಿವಾಸದಲ್ಲಿ ರಾತ್ರಿ ಮಲಗಿದ್ದ ನಾಲ್ವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹ ಹಿರೇಮಠ ಹತ್ಯೆ ಈ ಎರಡೂ ಅಮಾನವೀಯ ಘಟನೆಗಳು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಿ ನೇಹಾ ಹಿರೇಮಠ ಹತ್ಯೆಗೆ ಕಾರಣನಾದ ಆರೋಪಿ ಸೇರಿದಂತೆ ನಾಲ್ವರ ಹತ್ಯೆಗೈದು ಪರಾರಿಯಾದ ಹಂತಕರನ್ನು ಪತ್ತೆ ಮಾಡಿ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ ಅವರ ಮುಖಾಂತರ ಸಲ್ಲಿಸಿದರು. ಈ ವೇಳೆ ಎಸ್.ಎಸ್.ಕೆ. ಸಮಾಜದ ಪರಶುರಾಮ ನಿರಂಜನ, ರಾಜಣ್ಢಸಾ ಕಾಟವ, ಡಾ.ರವಿಕುಮಾರ ದಾನಿ, ವೆಂಕಟೇಶ ಕಾಟವ, ವಿಠ್ಠಲ ದಲಬಂಜನ, ಆನಂದ ರಾಯಬಾಗಿ, ದೀಪಕ ಮೇರವಾಡೆ, ಪರಶುರಾಮ ಪವಾರ ಸೇರಿದಂತೆ ಅನೇಕರಿದ್ದರು.