ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಹುಬ್ಬಳ್ಳಿಯ ಕೆ.ಎಲ್.ಇ. ಬಿ.ವಿ.ಬಿ. ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಸಿ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಪ್ರತಿಭಟಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಮಾವೇಶಗೊಂಡ ಪ್ರಗತಿಪರ ಸಂಘಟನೆ ಒಕ್ಕೂಟದವರು ಹತ್ಯೆಗೈದ ಹಂತಕ ಫಯಾಜ್’ನನ್ನ ಘೋರ ಶಿಕ್ಷೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನಜೀರಸಾಬ ಮೂಲಿಮನಿ ಮಾತನಾಡಿ, ಹುಬ್ಬಳ್ಳಿಯ ಕೆ.ಎಲ್.ಇ. ಬಿ.ವಿ.ಬಿ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಡಹಗಲೇ ಭೀಕರವಾಗಿ ಹತ್ಯೆಗೈದಿರುವುದು ಇಡೀ ಮಾನವ ಕುಲ ತಲೆತಗ್ಗಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಅನೇಕ ದುಷ್ಕೃತ್ಯಗಳು ಸಮಾಜದಲ್ಲಿ ನಡೆಯುತ್ತಿದ್ದು, ಕಾನೂನಿನ ಭಯವಿಲ್ಲದಂತಾಗಿದೆ. ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರ ಮುಖಾಂತರ ಸಲ್ಲಿಸಿದರು.
ಈ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆರ್.ಕೆ. ದೇಸಾಯಿ, ನಬಿಸಾಬ ಕುಷ್ಟಗಿ, ಶಂಕರಗೌಡ ಪಾಟೀಲ್, ಅಮೀನುದ್ದಿನ್ ಮುಲ್ಲಾ, ಅಸನುದ್ದಿನ್ ಆಲಂಬರದಾರ, ಗುಲಾಂ ಹುಸೇನ, ಶರಣಪ್ಪ ತಾವರಗೇರಾ ಸೇರಿದಂತೆ ಇತರರಿದ್ದರು.