ಕುಷ್ಟಗಿ ತಾಲೂಕಿನ ಮರ್ಯಾದೆ, ಸ್ವಾಭಿಮಾನಕ್ಕಾಗಿ ಡಾ.ಕ್ಯಾವಟರಗೆ ಮತ ನೀಡಿ – ಡಿ.ಎಚ್. ಪಾಟೀಲ್

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಕುಷ್ಟಗಿ ತಾಲೂಕಿನ ಮರ್ಯಾದೆ, ಸ್ವಾಭಿಮಾನಕ್ಕಾಗಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರಗೆ ಮತ ನೀಡಿ ಎಂದು ವಿಧಾನಸಭಾ ವಿರೋಧ ಪಕ್ಷದ ಮುಖ್ಯಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಹೇಳಿದರು.

ಅವರು, ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಮಂಗಳವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಎನ್’ಡಿಎ ಮೈತ್ರಿಕೂಟದ ಅಭ್ಯರ್ಥಿಯಾದ ಡಾ.ಬಸವರಾಜ ಕ್ಯಾವಟರ್ ಪರ ಮತಯಾಚಿಸಿದರು.

ಲೋಕಸಭೆಯಾದಾಗ ಮೊದಲಿಗೆ ಕುಷ್ಟಗಿ ಲೋಕಸಭೆ ಕ್ಷೇತ್ರವಾಗಿತ್ತು. ಆಗ ಈ ಕ್ಷೇತ್ರದಲ್ಲಿ ಯಾರೂ ಸ್ಪರ್ಧಿಸಿರಲಿಲ್ಲ. ನಂತರ ಕೊಪ್ಪಳ ಲೋಕಸಭಾ ಕ್ಷೇತವಾದರೂ ಈ ತಾಲೂಕಿನಿಂದ ಯಾರೂ ಸ್ಪರ್ಧಿಸಿರಲಿಲ್ಲ. ಸಧ್ಯ ಕುಷ್ಟಗಿ ಕ್ಷೇತ್ರದ ವಿದ್ಯಾವಂತ ಯುವಕ ಡಾ.ಬಸವರಾಜ ಕ್ಯಾವಟರ್ ಅವರನ್ನು ಗುರುತಿಸಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಟಿಕೇಟ್ ನೀಡಿದೆ. ಇದು ಕುಷ್ಟಗಿ ತಾಲೂಕಿನ ಮರ್ಯಾದೆ, ಸ್ವಾಭಿಮಾನದ ಪ್ರಶ್ನೆಯಾಗಿದೆ. ಜೊತೆಗೆ ದೇಶದ ಭದ್ರತೆಯ ಹಿತದೃಷ್ಟಿಯಿಂದ ಮತದಾರರು ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತದಾನ ಮಾಡುವ ಮೂಲಕ ಡಾ.ಬಸವರಾಜ ಕ್ಯಾವಟರ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ನಯಾಪೈಸಾ ಅನುದಾನ ನೀಡದೆ ಕೇವಲ ಗ್ಯಾರಂಟಿ ಯೋಜನೆಗಳಿಗೆ ನೀಡಿದೆ. ಅದಕ್ಕೆ ವಿರೋಧವಿಲ್ಲ. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವಾಗಬೇಕು ಎಂದು ಜನತೆ ಬಿಜೆಪಿ ತೊರೆದು ಕಾಂಗ್ರೆಸ್ ತಂದಿದ್ದಾರೆ. ಆದರೆ, ಒಂದು ಕೈಯಲ್ಲಿ ಕಿತ್ತು ಮತ್ತೊಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವದರಿಂದ ಮಹಿಳೆಯರು ಕಾಂಗ್ರೆಸ್ ಅನ್ನು ವಿರೋಧಿಸುತ್ತಿದ್ದಾರೆ. ದೇಶದ ಸುಭದ್ರತೆ, ಅಭಿವೃದ್ಧಿಗೆ ಮೋದಿಯವರನ್ನು ಬೆಂಬಲಿಸುವ ಹೇಳಿಕೆ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇಶ ಉಳಿದರೆ ನಾವು ಉಳಿಯಲು ಸಾಧ್ಯ. ರಾಜ್ಯದಲ್ಲಿ ಕೊಲೆ ಸುಲಿಗೆಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಈ ಸರ್ಕಾರದಿಂದ ಜನತೆಗೆ ರಕ್ಷಣೆ ಇಲ್ಲ. ಕಾಂಗ್ರೆಸ್’ನವರು ಗ್ಯಾರಂಟಿ ಯೋಜನೆಗಳಿಂದಲೇ ಎಲ್ಲವೂ ಮಾಡಲು ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ. ಜನತೆ ಬುದ್ದಿಜೀವಿಗಳಿದ್ದು, ಸಮಾಜ ಒಡೆಯುವಂತ ಕೆಲಸ ಮಾಡುವ ಕಾಂಗ್ರೆಸ್ನ ಯಾವುದೇ ಗ್ಯಾರಂಟಿಗಳಿಗೆ, ಯಾವುದೇ ಬೂಟಾಟಿಕೆ ಮಾತುಗಳಿಗೆ ಮೋಸ ಹೋಗದೆ, ದೇಶದ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ ದೇಶದ ಶಕ್ತಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತ ಕೇಂದ್ರದಲ್ಲಿ ಮತ್ತೊಮ್ಮೆ ತರಲು ಬೆಂಬಲಿಸಿ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಮುಖಂಡ ದೇವೇಂದ್ರಪ್ಪ ಬಳೂಟಗಿ, ಈರಣ್ಣ ಗಜೇಂದ್ರಗಡ, ಹನುಮಂತಪ್ಪ, ಸಿದ್ದಪ್ಪ, ಮರಸಣ್ಣ ತಾಳದ ಸೇರಿದಂತೆ ಅನೇಕರು ಇದ್ದರು.

ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ ಕುಷ್ಟಗಿ ತಾಲೂಕಿನ ಯುವಕ ಡಾ‌.ಬಸವರಾಜ ಕ್ಯಾವಟರ್’ಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ಕೊಟ್ಟಿದೆ. ಹೀಗಾಗಿ ನಮ್ಮವರೇಯಾದ ಅಭ್ಯರ್ಥಿಗೆ ತಾಲೂಕಿನ ಜನತೆ ಹೆಚ್ಚು ಮತ ನೀಡಿ ಗೆಲ್ಲಿಸಬೇಕು

– ದೊಡ್ಡನಗೌಡ ಎಚ್.ಪಾಟೀಲ್, ಶಾಸಕರು ಕುಷ್ಟಗಿ.