ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡತಗೇರಾ ಗ್ರಾಮಸ್ಥರು, ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ಜರುಗಿತು.
ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 350ಕ್ಕೂ ಹೆಚ್ಚು ಮನೆಗಳಿವೆ. ಪ್ರತಿ ಮನೆಗಳಿಗೂ ಜಲಜೀವನ ಮಷಿನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ನಳ ಅಳವಡಿಸಲಾಗಿದೆ. ಆದರೆ, ಕಳೆದೆರಡು ತಿಂಗಳಿನಿಂದ ಕುಡಿಯಲು ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಸದ್ಯ ಬೇಸಿಗೆಯಲ್ಲಿ ನೀರು ಸಿಗದೇ ಊರಿನ ಜನ ಪರದದಾಡುವಂತಾಗಿದೆ.
ಕುಡಿಯುವ ನೀರಿಗಾಗಿ ಗ್ರಾಪಂ ಅಧಿಕಾರಿಗೆ ದೂರು ನೀಡಿದ ಬಳಿಕ ಒಂದೆರಡು ದಿನ ನೀರು ಪೂರೈಸಲಾಗುತ್ತದೆ. ನಂತರ ದಿನಗಳಲ್ಲಿ ಮತ್ತೆ ನೀರು ಪೂರೈಕೆ ಕಡಿತಗೊಳ್ಳತ್ತದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಖಾಸಗಿ ಜಮೀನುದಾರರೊಂದಿಗೆ ಶಾಮೀಲಾಗಿದ್ದು, ಓವರ್ ಹೆಡ್ ಟ್ಯಾಂಕಿನಿಂದ ಗ್ರಾಮಕ್ಕೆ ಪೂರೈಸುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಮುಖ್ಯ ಪೈಪ್ಲೈನ್ ನೀರನ್ನು ಖಾಸಗಿ ಜಮೀನುಗಳಿಗೆ ಹರಿಸಿಕೊಳ್ಳಲಾಗುತ್ತಿದೆ ಇದರಿಂದಾಗಿ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಗಂಗಪ್ಪ ನೆಲ್ಲೂರ್, ಶರಣಪ್ಪ ಆಡಿನ, ಶರಣಪ್ಪ ದ್ಯಾಮಣ್ಣವರ, ದೇವೇಂದ್ರಪ್ಪ ಉನಚಗೇರಿ, ಭೊಮ್ಮಲಿಂಗಪ್ಪ ದ್ಯಾಮಣ್ಣವರ, ಮಲ್ಲಪ್ಪ ಗೌಡ್ರ ನೀಲಪ್ಪ ಹಟ್ಟಿ, ಮಂಜುನಾಥ ಮುಶಿಗೇರಿ, ಶರಣಪ್ಪ ದ್ಯಾಮಣ್ಣವರ, ಕಲ್ಲಪ್ಪ ಪೂಜಾರ, ಪರಸಪ್ಪ ಪಿಲಾಬಂಟರ, ಶಿವಲೀಲಾ ಹಿರೇಮಠ, ಮುತ್ತವ್ವ ನೆಲ್ಲೂರ, ಬಸಮ್ಮ ಕುರಟ್ಟಿ, ಮುತ್ತವ್ವ ಪಿಲಾಬಂತ್ರ, ಹಣಮವ್ವ ಕುರಟ್ಟಿ, ಶಾಂತವ್ವ ಪೋಲೆಷಿ, ಶಿವಬಸಮ್ಮ ಹಿರೇಮಠ, ಮಂಜುನಾಥ್ ದ್ಯಾಮಣ್ಣವರ, ನಿಂಗರಾಜ್ ಅಣ್ಣಿಗೇರಿ ಇತರರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರಿಂದ ಅಹವಾಲು ಆಲಿಸಿದ್ದೇನೆ. ಗ್ರಾಮೀಣ ನೈರ್ಮಲ್ಯ ಹಾಗೂ ನೀರು ಪೂರೈಕೆ ಇಲಾಖೆಯ ಎಇಇ ಅವರಿಗೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ.
– ನಿಂಗಪ್ಪ ಎಸ್. ಮಸಳಿ
ತಾಲೂಕು ಪಂಚಾಯಿತಿ ಇಒ, ಕುಷ್ಟಗಿ.