ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ನಾಳೆ ಏ.25 ಮತ್ತು 26 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೂ ಕುಷ್ಟಗಿ ತಾಲೂಕಿನ 267 ಮತಗಟ್ಟೆ ವ್ಯಾಪ್ತಿಯಲ್ಲಿ ವಿಕಲಚೇತನರು ಮತ್ತು 85 ವರ್ಷ ಮೇಲ್ಪಟ್ಟ ಮತದಾರರ ಮನೆ ಮನೆ ಮತದಾನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಅವರು ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಈ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಶಕ್ತ ಅಂಗವಿಕಲರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ತಂಡ ರಚಿಸಲಾಗಿದ್ದು, 342 ಮತದಾರರು, ಮನೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ., ಮನೆ ಮತದಾನಕ್ಕೆ ತೆರಳಲು 12 ಮಾರ್ಗ ಸಿದ್ಧಪಡಿಸಲಾಗಿದೆ. ಒಂದು ತಂಡದಲ್ಲಿ ಇಬ್ಬರು ಮತಗಟ್ಟೆ ಅಧಿಕಾರಿ, ತಲಾ ಒಬ್ಬರು ಪೊಲೀಸ್, ವಿಡಿಯೊಗ್ರಾಫರ್ ಹಾಗೂ ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ. ವಲಯ ಅಧಿಕಾರಿಗಳು ಮತದಾನದ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದ ಸಹಾಯಕ ಚುನಾವಣಾ ಅಧಿಕಾರಿ ರೇಷ್ಮಾ ಹಾನಗಲ್ ಅವರು, ತಂಡಗಳು ಯಾವ ಸಮಯದಲ್ಲಿ, ಎಲ್ಲಿಂದ, ಎಲ್ಲಿಗೆ ಹೋಗುತ್ತವೆ ಎಂಬ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೂ ನೀಡಲಾಗಿದೆ. ಮತದಾನ ಪ್ರಕ್ರಿಯೆಯು ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ತಮ್ಮ ಏಜೆಂಟರು ಹಾಜರಿರುವಂತೆ ಪಕ್ಷಗಳಿಗೆ ತಿಳಿಸಲಾಗಿದೆ. ಇಡೀ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದರು. ಈಗಾಗಲೇ ಮನೆಮನೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರು, ತಮಗೆ ತಿಳಿಸಿರುವ ನಿಗದಿತ ದಿನಾಂಕದಂದು ಮನೆಯಲ್ಲಿ ಹಾಜರಿದ್ದು ತಮ್ಮ ಹಕ್ಕು ಚಲಾಯಿಸಬೇಕು. ತಪ್ಪಿದರೆ ಮತಗಟ್ಟೆಗಳಲ್ಲಿ ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಚುನಾವಣಾ ಆಯೋಗ ಕಲ್ಪಿಸಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಮತದಾರರ ನೋಂದಣಿ ಅಧಿಕಾರಿಯಾದ ತಹಸೀಲ್ದಾರ್ ರವಿ ಎಸ್. ಅಂಗಡಿ, ಶಿರಸ್ತೇದಾರ ಜಿ.ಸತೀಶ್ ಹಾಗೂ ಚುನಾವಣಾ ವಿಭಾಗ ಸಿಬ್ಬಂದಿ ಹಾಜರಿದ್ದರು.