ಬಯ್ಯಾಪೂರ ಹೇಳಿಕೆಗೆ ಜನಾರ್ದನ ರೆಡ್ಡಿ ಟಾಂಗ್..!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : 9 ಬಾರಿ ಪಕ್ಷ ಬದಲಾಯಿಸಿರುವ ಸಂಗಣ್ಣ ಕರಡಿಗೆ ನನ್ನ ಹೆಸರೇಳುವ ಮೂಲಕ ಹತಾಶೆಯಿಂದ ಪರೋಕ್ಷವಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರು ಒಬ್ಬ ಅಪ್ಪಗೆ ಹುಟ್ಟಿದವರು ಪ್ರಾಮಾಣಿಕವಾಗಿ ಒಂದೇ ಪಕ್ಷದಲ್ಲಿರುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ ಗ್ರಾಮದಲ್ಲಿ ಗುರುವಾರ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ ಪರ ಮತಯಾಚಿಸಿ ಮಾತನಾಡಿದರು. ಚುನಾವಣೆಯಲ್ಲಿ ಮುಂದೆ ಅವಕಾಶ ಸಿಗದಿರುವ ಕಾರಣದಿಂದ ಬಯ್ಯಾಪೂರು ಹತಾಶೆಗೊಳಗಾಗಿ ಈ ರೀತಿ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.
ನನ್ನ ಮೂಲ ಪಕ್ಷ ಬಿಜಿಪಿಯಾಗಿದೆ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗದೇ ಸ್ವಂತ ಪಕ್ಷ ಕಟ್ಟಿಕೊಂಡಿದ್ದೇನೆ. ನಾನು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ₹500 ಕೋಟಿ ನೀಡಿದರೆ ಕಾಂಗ್ರೆಸ್ ಸೇರುತ್ತೇನೆ. ಕೇಂದ್ರ ಬಿಜೆಪಿ ಸರ್ಕಾರ 2000 ಕೋಟಿ ನೀಡಿದರೆ ಬಿಜೆಪಿ ಸೇರುತ್ತೇನೆ ಎಂದಿದ್ದೆ. ಬಿಜೆಪಿಯವರು ಗಂಗಾವತಿ ಅಭಿವೃದ್ಧಿಗೆ ಸಾವಿರಾರು ಕೋಟಿ ಕೊಡುತ್ತೇನೆ ಎಂದು ಕರೆದರು ಹಾಗಾಗಿ ನನ್ನ ತಾಯಿ ಪಕ್ಷಕ್ಕೆ ಮರಳಿ ಹೋಗಿದ್ದೇನೆ ವಿನಃ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿಲ್ಲ ಎಂದ ಜನಾರ್ದನ ರೆಡ್ಡಿ, 9 ಬಾರಿ ಪಕ್ಷ ಬದಲಾಯಿಸಿರುವ ಸಂಗಣ್ಣ ಕರಡಿ ಸಧ್ಯ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅಪ್ಪಗೆ ಹುಟ್ಟಿದವರು ಪ್ರಾಮಾಣಿಕವಾಗಿ ಒಂದೇ ಪಕ್ಷದಲ್ಲಿ ಇರುತ್ತಾರೆ ಎಂಬ ಹೇಳಿಕೆ ನನ್ನ ಹೇಸರಿನ ಮೂಲಕ ಪರೋಕ್ಷವಾಗಿ ವೇದಿಕೆಯಲ್ಲಿದ್ದ ಸಂಗಣ್ಣ ಕರಡಿ ಅವರಿಗೆ ಹೇಳಿರಬಹುದು ಎಂದು ಶಾಸಕ ಜನಾರ್ದನ ರೆಡ್ಡಿ ಬಯ್ಯಾಪೂರಗೆ ತಿವಿದರು.

ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಂದ ಜನತೆ ಮೈಗಳ್ಳರಾಗುತ್ತಾರೆ. ದುಡಿಯುವುದನ್ನ ಬಿಡುತ್ತಾರೆ. ಗ್ಯಾರಂಟಿ ಶಾಶ್ವತವಲ್ಲ. ಮುಂದೊಂದು ದಿನ ಪರಿಸ್ಥಿತಿ ಕಷ್ಟ. ಜನ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ಗೆ ಹಾಕುವ ಓಟು ಕಸದ ಬುಟ್ಟಿಗೆ ಹಾಕಿದಂತೆ. 500 ವರ್ಷಗಳಿಂದಾಗದ ರಾಮ ಮಂದಿರ ಕನಸ್ಸನ್ನು ಮೋದಿ ನನಸು ಮಾಡಿದ್ದಾರೆ. 10 ವರ್ಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ ಮಾಡಿದ್ದಾರೆ.

ಸಿಲಿಂಡರ್ ಗ್ಯಾಸ್, ಜಲಜೀವನ ಮಷಿನ ಹಳ್ಳಿಗಳ ಪ್ರತಿ ಮನೆಗಳಿಗೆ ನಲ್ಲಿಗಳು, ಶೌಚಾಲಯ, ಜೀರೋ ಅಕೌಂಟ್, ದೇಶ ಅಭಿವೃದ್ಧಿಯಾಗಲು ಬಂದರು ನಿರ್ಮಾಣ ಸೇರಿ ಹೀಗೇ ಹತ್ತು ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಇದು ಇನ್ನೂ ಟ್ರೈಲರ್ ಮೋದಿ ಅವರಿಂದ ಅಭಿವೃದ್ಧಿ ಕಾರ್ಯ ಇನ್ನೂ ಸಾಕಷ್ಟಾಗಬೇಕಿದೆ. ನಾಲ್ಕೈದು ವರ್ಷಗಳಲ್ಲಿ ಈಗಾಗಲೇ ನರೇಂದ್ರ ಮೋದಿಜಿ ಇಡೀ ಪ್ರಪಂಚದ ಭೂಪಟದಲ್ಲಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿ ಗುರುತಿಸಿ ಖ್ಯಾತಿಯಾಗಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ರೈಲ್ವೆ, ಚತುಷ್ಪಥ ಹೆದ್ದಾರಿ ಅಭಿವೃದ್ಧಿಯಾಗಿದ್ದು, ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಜೊತೆಗೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯಾದಂತೆ ಅಂಜನಾದ್ರಿಯಲ್ಲು ಸಹ ಭವ್ಯ ಮಂದಿರವಾಗಿ ಬಾಲಹನುಮ ಪ್ರತಿಷ್ಠಾಪನೆಯಾಗಿ ಇಡೀ ವಿಶ್ವದಲ್ಲೇ ಮಂದಿರಗಳು ಪ್ರಸಿದ್ದಿಯಾಗಲಿವೆ. ಹಾಗಾಗಿ ಕೊಪ್ಪಳದಿಂದ ಬಿಜೆಪಿ ಗೆಲ್ಲಿಸಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿಜಿ 3ನೇ ಬಾರಿಗೆ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಈ ಬಾರಿ ಬಿಜೆಪಿ 400 ಸ್ಥಾನಗಳು ಬರಲಿವೆ. 400 ಎಂಪಿಗಳ ಸಾಲಿನಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಬಹುಭಾಷಾ ಪ್ರವೀಣ ಡಾ.ಬಸವರಾಜ ಕ್ಯಾವಟರ್ ಅವರನ್ನು ಕಾಣಲು ಕ್ಷೇತ್ರದ ಜನತೆ ಬಹುಮತ ನೀಡಿ ಗೆಲ್ಲಿಸುವ ಮೂಲಕ ಶಾಸಕ ದೊಡ್ಡನಗೌಡ ಪಾಟೀಲರ ಕೈಬಲಪಡಿಸಬೇಕು ಎಂದು ಜನಾರ್ಧನ ರೆಡ್ಡಿ ಮತಯಾಚಿಸಿದರು.

ವಿಧಾನಸಭಾ ವಿರೋಧಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಮಾತನಾಡಿ, ಎಲ್ಲೋ ಇರುವ ಸಂಗಣ್ಣ ಕರಡಿಗೆ ಮಾತುಕೊಟ್ಟು ಸ್ವಪಕ್ಷದಲ್ಲಿದ್ದುಕೊಂಡು ಎರಡುಬಾರಿ ಕಾಂಗ್ರೆಸ್ ಕುತ್ತಿಗೆ ಕೊಯ್ದಿರುವ ಮಾಜಿ ಶಾಸಕ ಬಯ್ಯಾಪೂರ, ವೇದಿಕೆಮೇಲೆನೇ ಪಕ್ಕದಲ್ಲಿ ಕುಳಿತ ರಾಜಶೇಖರ ಹಿಟ್ನಾಳ ಮುಂದೆನೇ ಒಬ್ಬ ತಂದೆಗೆ ಹುಟ್ಟಿರುವವರು ಮಾತುಕೊಟ್ಟ ಪಕ್ಷಕ್ಕೆ ಪ್ರಾಮಾಣಿಕವಾಗಿ ಇರಬೇಕು ಎಂಬ ಹೇಳಿಕೆ. ಈ ಕ್ಷೇತ್ರದ ಜನ ದಡ್ಡರಿದ್ದಾರೆ, ಎಲ್ಲಿಂದಲೋ ಬಂದು ಈ ಕ್ಷೇತ್ರವನ್ನು ಎರಡು ಬಾರಿ ಆಳಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಲಿಂಗಾಯತರು ಪ್ರಬಲರಾದರೆ ಆತಂಕ ಎಂಬ ಹಿನ್ನೆಲೆ ಲಿಂಗಾಯತರು ಬೆಳೆಯಬಾರದು ಎಂಬ ದೂರದೃಷ್ಟಿಯಿಂದ ಈ ಮಾತನ್ನು ಹೇಳಿರಬಹುದು ಎಂದ ಶಾಸಕ ದೊಡ್ಡನಗೌಡ ಪಾಟೀಲ್,. ಈ ಕುರಿತು ಮಾಧ್ಯಮ ಮೂಲಕ ಹೇಳಿಕೆ ನೀಡಿದರೂ ಇವತ್ತಿನವರೆಗೂ ಬಯ್ಯಾಪೂರು ಹೇಳಿಕೆ ನೀಡುತ್ತಿಲ್ಲ ಎಂದರು.

ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮತಯಾಚಿಸಿದರು. ಮುಖಂಡರಾದ ಫಕೀರಪ್ಪ ಚಳಗೇರಿ, ಮಲ್ಲಣ್ಣ ಪಲ್ಲೇದ, ನ್ಯಾಯವಾದಿ ನಾಗಪ್ಪ ಸೂಡಿ ಕಾಂಗ್ರೆಸ್ ದುರಾಡಳಿತ ಕುರಿತು ಮಾತನಾಡಿದರು.
ಈ ವೇಳೆ ಶಾಸಕರಾದ ಹೇಮಲತಾ ನಾಯಕ, ಸುಶೀಲ್ ನಮೋಶಿ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಮುಖಂಡ ಪ್ರಭಾಕರ ಚಿಣಿ, ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಅನೇಕ ಮುಖಂಡರು ಇದ್ದರು.