ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ನೀರಾವರಿ, ಕೃಷ್ಣಾ ಬಿ’ಸ್ಕೀಂ, ಕೆರೆ ತುಂಬಿಸೋ ವಿಚಾರದಲ್ಲಿ ಬಿಜೆಪಿಯವರದ್ದು ಏನು ಪಾತ್ರವಿಲ್ಲ. ಇವರು ಯಾರು ಎಣ್ಣೆ ಹಚ್ಚಿಕೊಂಡು ಎರೆದುಕೊಳ್ಳುತ್ತಾರೋ ಅವರ ಕೆಳಗ ಡೊಗ್ಗಿಕೊಂಡರೆ ನಮ್ಮ ತಲೆಗೂ ಚೂರು ಎಣ್ಣೆ ಬೀಳುತ್ತದೆ ಎಂಬ ಮನಸ್ಥಿತಿಯವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕುಟುಕಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ಏ.29ಕ್ಕೆ ಸಿಎಂ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮ ಹಿನ್ನೆಲೆ ವೇದಿಕೆ ಸಿದ್ಧತೆ ವೀಕ್ಷಿಸಲು ಶನಿವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೃಷ್ಣಾ ಬಿ’ಸ್ಕೀಂ ಪ್ರಾರಂಭವಾದಾಗ ಕೊಪ್ಪಳ ಭಾಗಕ್ಕೆ 12 ಟಿಎಂಸಿ ನೀರು ಬರಬೇಕು ಎಂದು ಅನುದಾನ ನೀಡಿದ್ದೇ ಸಿಎಂ ಸಿದ್ದರಾಮಯ್ಯ, ಸದ್ಯ ಕಾಲುವೆ ನಿರ್ಮಾಣ ಕಷ್ಟ ಸಾಧ್ಯ ಎಂದು ಕೆರೆ ತುಂಬಿಸುವ ಯೋಜನೆ ಕುರಿತು ಚಿಂತನೆ ಮಾಡಿ ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಅನುದಾನ ನೀಡಿದರು. ನೀರಾವರಿ ವಿಚಾರ, ಕೃಷ್ಣ ಬಿಸ್ಕೀಂ ವಿಚಾರ, ಕೆರೆ ತುಂಬಿಸೋ ವಿಚಾರದಲ್ಲಿ ಬಿಜೆಪಿಯವರದ್ದು ಏನು ಪಾತ್ರವಿಲ್ಲ. ಯಾವುದೇ ಕೆಲಸವಿರಲಿ ಕೊಪ್ಪಳ ಜಿಲ್ಲೆಗೆ, ರಾಜ್ಯಕ್ಕೆ ಅಥವಾ ದೇಶಕ್ಕೆ ಏನು ಕೊಡುಗೆಯಿಲ್ಲ ಎಂದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದೊಳಗೆ ಈಡೇರಿಸಿದೆ. ಈ ಗ್ಯಾರಂಟಿಗಳೇ ರಾಜ್ಯದ ಜನತೆ ಕಾಂಗ್ರೆಸ್ ಪರವಾಗಿ ಒಲವು ತೋರಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಸೇರಿ ರಾಜ್ಯದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಯಾವುದೇ ಆಸೆ, ಆಮಿಷ ಬೇಡಿಕೆ ಒಪ್ಪಂದವಿಲ್ಲದೇ ಅವರು ಪಕ್ಷ ಸೇರಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಸ್ಯೆ ಬಗ್ಗೆ ಗಾಲಿ ಜನಾರ್ದನ ರೆಡ್ಡಿಗೇನು ಗೊತ್ತಿದೆ. ಬಾಯಿ ಚಪಲಕ್ಕೆ ಮಾತನಾಡುತ್ತಾನೆ. ವಾಸ್ತವ ಸತ್ಯ ಆತನಿಗೆ ಗೊತ್ತಿಲ್ಲ. ಬಿಜೆಪಿ ತೊರೆದು KRP ಪಕ್ಷ ಕಟ್ಟಿ ಗಂಗಾವತಿ ಕ್ಷೇತ್ರದ ಜನರನ್ನು ನಡುಬಿದಿಯಲ್ಲಿ ಬಿಟ್ಟು ಬಿಜೆಪಿಗೆ ಸೇರಿದ್ದಾನೆ. ಬಯ್ಯಾಪೂರ ಬಗ್ಗೆ ಹಗುರವಾಗಿ ಮಾತನಾಡುವ ಜನಾರ್ದನ ರೆಡ್ಡಿ, ಜಿಲ್ಲೆಗೆ ತಾನೇನು ಮಾಡಿದ್ದಾನೆ ಎಂಬದು ಮೊದಲು ವಿವರಿಸಲಿ ಎಂದು ಸವಾಲು ಹಾಕಿದರು.
ರೆಡ್ಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ವರ್ಷದ ಹಿಂದೆ ಸ್ವಂತ ಖರ್ಚಿನಲ್ಲಿ ಗಂಗಾವತಿ ಜನರಿಗೆ ಎರಡು ಬೆಡ್ ರೂಮಿನ ಮನೆ ಕಟ್ಟಿಸಿಕೊಡುವುದಾಗಿ ಭರವಸೆಯ ನೀಡಿದ ಜನಾರ್ಧನ ರೆಡ್ಡಿ, ಕಟ್ಟಿಸ ಕೊಟ್ಟಿದ್ದಾರೆಯೇ ಎಂಬುದು ಗಂಗಾವತಿ ಜನರನ್ನು ಕೇಳಿ, ಅವರ ಮಾತನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದರಲ್ಲಿ ಮೋದಿಯವರನ್ನು ಮೀರಿಸಲಿದ್ದಾನೆ. ಜಿಲ್ಲೆಯಲ್ಲಿ ಜನಾರ್ಧನರೆಡ್ಡಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ವೋಟು ತರುವಂತ ಶಕ್ತಿ ಆತನಲ್ಲಿಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಮಂದಿ ಸುಳ್ಳು ಹೇಳಿದ್ದಾರೆ, ಏನೇನು ಮಾಡಿದ್ದಾರೆ, ತಮಗೆಷ್ಟು ಸುಳ್ಳು ಹೇಳಿದ್ದಾರೆ ಎಂಬುದು ಕುರಿತು ಕಾಲಬಂದಾಗ ಹೇಳುತ್ತೇನೆ. ಜನಾರ್ಧನರೆಡ್ಡಿಯಿಂದ ಅಳಕು ಅಂಜಿಕೆಯೇನಿಲ್ಲ. ಇವರೆಷ್ಟು ಸತ್ಯವಂತರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದ ತಂಗಡಗಿ, ಕಾಂಗ್ರೆಸ್ ಬೆತ್ತಲೆಯಾಗಿದೆ ಎನ್ನಲು ಈ ದೇಶಕ್ಕೆ ಜನಾರ್ದನರೆಡ್ಡಿ ಕೊಡುಗೆಯೇನು? ಏನು ಅಭಿವೃದ್ಧಿ ಮಾಡಿದ್ದಾನೆ. ಈ ಜಿಲ್ಲೆಯ ಜನ ಆಯ್ಕೆ ಮಾಡಿ ವಿಧಾನಸಭಗೆ ಕಳುಹಿಸಿದ್ದಾರೆ ಕೊಪ್ಪಳ ಜಿಲ್ಲೆಯ ಬೇಡಿಕೆ ಕುರಿತು ಮನವಿ ಮಾಡಲು ಸ್ವತಃ ಹೇಳಿದರು ಅಧಿವೇಶನದಲ್ಲಿ ಕೊಪ್ಪಳ ಜಿಲ್ಲೆ ಬಗ್ಗೆ ಮಾತನಾಡದೇ ಬಳ್ಳಾರಿ ಕುರಿತು ಮಾತನಾಡಿದ ರೆಡ್ಡಿಯ ಕೊಡುಗೆ ಜಿಲ್ಲೆಗೆ ಏನು ಇಲ್ಲ ಎಂದರು.
ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ : ರಾಜ್ಯದ ಜನ ಕಾಂಗ್ರೆಸ್ ಪರವಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿ ಬದಲಾವಣೆ ಮಾಡುವುದು ಬಿಜೆಪಿಯವರ ಕೈಯಲ್ಲಿ ಕೊಡೊ ಅವಶ್ಯಕತೆಯಿದೆಯೇ? ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಆ ನಿರ್ಧಾರವನ್ನು ನಾವು ಮಾಡುವುದಲ್ಲ ಹೈಕಮಾಂಡ್ ಮಾಡುತ್ತೆ. ಕೊಪ್ಪಳ ಲೋಕಸಭಾ ಅಭ್ಯರ್ಥಿ ಗೆಲ್ಲಿಸಲು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಜಿಲ್ಲಾಧ್ಯಕ್ಷ ಸೇರಿ ಹಿರಿಯ ನಾಯಕರಿಗೆ ಜವಾಬ್ದಾರಿ ಹೈಕಮಾಂಡ್ ನೀಡಿದೆ. ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸುತ್ತಿದ್ದೇವೆ. ಹೈಕಮಾಂಡ್ ಈ ರೀತಿಯ ಸೂಚನೆ ಕೊಟ್ಟರೂ ಅದರಲ್ಲಿ ತಪ್ಪೇನಿದೆ ಎಂದರು.
ಖರ್ಗೆ ನೋವಿನಿಂದ ಹೇಳಿದ್ದಾರೆ: ಹತ್ತು ಬಾರಿ ಸತತವಾಗಿ ಗೆದ್ದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಹೈದರಾಬಾದ್ ಕರ್ನಾಟಕ ಹಾಗೂ ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಆರ್ಟಿಕಲ್ 371 ಜೆ ಲಾಭ ಪಡೆದು ಈ ಭಾಗದ ಎಲ್ಲಾ ಸಮಾಜದವರು ಉನ್ನತ ಸ್ಥಾನದ ನೌಕರಿ ಪಡೆದಿದ್ದಾರೆ ಅವರು ಮನೆಯಲ್ಲಿ ಖರ್ಗೆಯವರ ಭಾವಚಿತ್ರ ಹಾಕಬೇಕು. ಸೆಂಟ್ರಲ್ ಯುನಿವರ್ಸಿಟಿ, ಆಸ್ಪತ್ರೆ ಅಂತಹ ದೊಡ್ಡ ಕೊಡುಗೆ ನೀಡಿದ ಈ ಮನುಷ್ಯ ಸೋತಾಗ ಸಹಜವಾಗಿ ಮನಸ್ಸಿಗೆ ನೋವಾಗುತ್ತೆ. ಆ ನೋವಿನಿಂದ ಸತ್ತಾಗ ಸುಟ್ಟರೆ ಕ್ಯಾಂಡಲ್ ಹಚ್ಚಿ, ಮಣ್ಣು ಮಾಡಿದರೆ ಹಿಡಿ ಮಣ್ಣು ಹಾಕಲು ಬನ್ನಿ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ ಎಂಬ ಹತಾಶೆಯಿಂದಲ್ಲ ಎಂದರು.
ಪ್ರಧಾನಿ ಹುದ್ದೆ ಮೈತ್ರಿಕೂಟ ನಿರ್ಧಾರ : ಪ್ರಧಾನ ಮಂತ್ರಿ ಆಗುವಂತಹ ಸಾಮರ್ಥ್ಯ ಬಹಳಷ್ಟು ಜನರಿಗಿದೆ. 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಸೇರಿ
ನೂರಾರು ಮಂದಿ ಪ್ರಧಾನಮಂತ್ರಿ ಆಗುವಂತಹ ಸಾಮರ್ಥ್ಯ ಹೊಂದಿದ್ದಾರೆ. ಆ ಕುರಿತು ಮೈತ್ರಿಕೂಟದಲ್ಲಿ ನಿರ್ಧಾರವಾಗುತ್ತದ ಎಂದು ತಂಗಡಗಿ ತಿಳಿಸಿದರು.
ಬಿಜೆಪಿಯವರಿಗೆ ಜ್ಞಾನವಿಲ್ಲ : ಚಿನ್ನಪ್ಪ ರೆಡ್ಡಿ ಆಯೋಗದಲ್ಲಿ ಹಿಂದುಳಿದ ವರ್ಗದೊಳಗ ಮುಸ್ಲಿಮರನ್ನು ಸೇರಿಸಿದ್ದರು. 4 ರಷ್ಟು ಮೀಸಲಾತಿ ನೀಡಲಾಗಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಶೇ.4ರಷ್ಟು ಮೀಸಲಾತಿಯನ್ನು ತೆಗೆದುಹಾಕಿದರು. ನಂತರ ಮುಸ್ಲಿಮರು ಕೋರ್ಟಿಗೆ ಹೋದರು. ಯತಾಸ್ಥಿತಿ ಮುಂದುವರೆಯಲು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಕೋರ್ಟ್ ಆದೇಶ ಪ್ರಶ್ನಿಸಲು ಸಾಧ್ಯವೇ ಎಂದ ತಂಗಡಗಿ, ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೇವೆ ಎಂದು ಯಾರೂ ಹೇಳಿಲ್ಲ. ಹಿಂದುಳಿದ ವರ್ಗದ ಇಲಾಖೆ ಸಚಿವ ನಾನೇ ಇದ್ದೇನೆ. ಬಿಜೆಪಿಯವರು ದೊಡ್ಡ ಸುಳ್ಳು ಹೇಳುತಿದ್ದಾರೆ. ಸುಳ್ಳು ಜಾಹೀರಾತು ನೀಡುತಿದ್ದಾರೆ ಎಂದರು.
ರಾಜ್ಯಕ್ಕೆ ಬಿಜೆಪಿ ಚೆಂಬು ನೀಡಿದೆ : ಸೆಪ್ಟೆಂಬರ್ ತಿಂಗಳಲ್ಲಿ ಬರ ಪರಿಹಾರಕ್ಕೆ ರಾಜ್ಯದಿಂದ 18 ಸಾವಿರ ಕೋಟಿ ಹಾನಿಯಾಗಿರುವ ವರದಿ ಕಳುಹಿಸಲಾಗಿತ್ತು. ಕೇಂದ್ರ ಆಧ್ಯಯನ ತಂಡ ಭೆಟಿನೀಡಿ ವರದಿ ಪಡೆದಿತ್ತು. ರಾಜ್ಯದಲ್ಲಿ ಅನೇಕ ಸಭೆಗಳು ನಡೆಸಲಾಗಿತ್ತು. ಎರಡುಬಾರಿ ಸಿಎಂ ಪತ್ರ ಬರೆದಿದ್ದರು. ಸಂಬಂಧಿಸಿದ ಕಂದಾಯ, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿ ಈ ಮೂವರು ಭೇಟಿ ಕೊಟ್ಟಿದ್ದರು. ಡಿಸೆಂಬರ್ ತಿಂಗಳಲ್ಲಿ ಗೃಹಮಂತ್ರಿ ಅಮಿತ್ ಶಾ ಬರ ಪರಿಹಾರ ಸಭೆ ಮಾಡಬೇಕಾಗಿತ್ತು. ಸಭೆ ಮಾಡದೇ ತಪ್ಪು ಮಾಡಿ ರಾಜ್ಯದ ಜನತೆಗೆ ಮೋಸ ಮಾಡಿದ್ದು ಚೆಂಬು ಕೊಟ್ಟಂತಲ್ಲವೇ ಎಂದು ಪ್ರಶ್ನಿಸಿದ ತಂಗಡಗಿ, ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನುಯಿಲ್ಲ. ತೆರಿಗೆ ಹಂಚಿಕೆಯಲ್ಲು ಮೋಸ, ಬೇರೆ ರಾಜ್ಯಗಳಿಗೆ ಹೆಚ್ಚಿನ ಹಣ ನೀಡಿ ತಾರತಮ್ಯ ಮಾಡುತಿದ್ದಾರೆ ಹಾಗಾಗಿ ರಾಜ್ಯಕ್ಕೆ ಬಿಜೆಪಿ ನೀಡಿರುವುದು ಅಕ್ಷಯಪಾತ್ರೆಯಲ್ಲ ಚೆಂಬು ಎಂಬುದು ಸತ್ಯ ಎಂದರು.
ಬಿಜೆಪಿ ಉತ್ತರ ನೀಡಲಿ : ಕಾರ್ಯಕ್ರಮಗಳಲ್ಲಿ ಮಾತನಾಡುವ ದೊಡ್ಡನಗೌಡರು, ದೇಶದ ಜನರ ಬ್ಯಾಂಕ್ ಖಾತೆಗೆ 15 ಲಕ್ಷ ಹಣ, ಎರಡು ಕೋಟಿ ಉದ್ಯೋಗ ಬಂತೆ, ರೈತರ ಆದಾಯ ದ್ವಿಗುಣವಾಯಿತೆ, 100 ಸ್ಮಾರ್ಟ್ ಸಿಟಿ ಆದವೇ, ಪುಲ್ವಾಮಾ ದಾಳಿಗೆ 400 ಕೆ.ಜಿ. RSX ಹೇಗೆ ಬಂತು ಅದು ತನಿಖೆ ಮಾಡಿ ಐದು ವರ್ಷ ಕಳೆದರೂ ವರದಿ ಏನುಬಂತು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ವಾರ್ಷಿಕ ಸಾವಿರ ಕೋಟಿ ಹಣ ಕೊಡುವುದಾಗಿ ಹೇಳಿದ್ದ ಮೋದಿ ಹಣ ಕೊಟ್ಟರೇ ? ಇದಕ್ಕೆ ಉತ್ತರ ಹೇಳಲಿ. ಬಾಯಿ ತೆರೆದರೆ ಹಿಂದೂ ಮುಸ್ಲಿಂ, ಪಾಕಿಸ್ತಾನ ಎನ್ನುತ್ತೀರಿ ಎಂದು ಸಚಿವ ಶಿವರಾಜ ತಂಗಡಗಿ ಹರಿಹಾಯ್ದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಮುಖಂಡರಾದ ಬಸವರಾಜ ಹಿಟ್ನಾಳ, ಮೈನುದ್ದಿನ್ ಮುಲ್ಲ, ಚಂದ್ರಶೇಖರ ನಾಲತವಾಡ, ಮಾಲತಿ ನಾಯಕ ಸೇರಿದಂತೆ ಅನೇಕ ಮುಖಂಡರು ಇದ್ದರು.
ಪ್ರಧಾನ ಮಂತ್ರಿ ಆಗುವಂತಹ ಸಾಮರ್ಥ್ಯ ಬಹಳಷ್ಟು ಜನರಿಗಿದೆ. 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಸೇರಿ ನೂರಾರು ಮಂದಿ ಪ್ರಧಾನಮಂತ್ರಿ ಆಗುವಂತಹ ಸಾಮರ್ಥ್ಯ ಹೊಂದಿದ್ದಾರೆ. ಆ ಕುರಿತು ಮೈತ್ರಿಕೂಟದಲ್ಲಿ ನಿರ್ಧಾರವಾಗುತ್ತದೆ
– ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ.