ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಏಪ್ರಿಲ್ 29 ಸೋಮವಾರ ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.
ಅಂದು ಪಟ್ಟಣದ ರಾಯಚೂರು ರಸ್ತೆ ಬಳಿಯ ಟಿಎಪಿಸಿಎಂಎಸ್, ಕೆ.ಎಮ್.ಎಫ್. ಹಾಲು ಶೀತಲೀಕರಣ ಕೇಂದ್ರದ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಈ ವೊಂದು ಪ್ರಚಾರ ಸಭೆಯಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಷ್ಟಗಿ, ಯಲಬುರ್ಗಾ, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸುಮಾರು 35 ಸಾವಿರ ಜನ ಆಗಮಿಸುವರು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವಾರು ಈಗಾಗಲೇ ಭೇಟಿ ನೀಡಿ ಪ್ರಚಾರ ಸಭೆ ಕೈಗೊಳ್ಳಲಾಗಿದೆ ಜನರಿಂದ ಹಿಂದಿನ ವಿಧಾನಸಭಾ ಚುನಾವಣೆಗಿಂತ ಇಂದು ಭಾರಿ ಸ್ಪಂಧನೆ ವ್ಯಕ್ತವಾಗಿದೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕುಷ್ಟಗಿ ಪಟ್ಟಣದಲ್ಲಿ ಬಹಿರಂಗ ಪ್ರಚಾರಸಭೆ ಆಯೋಜಿಸಿದ್ದು, ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಮುಖಂಡರಾದ ಬಸವರಾಜ ಹಿಟ್ನಾಳ, ಶೇಖರಗೌಡ ಮಾಲಿಪಾಟೀಲ, ಮಾಲತಿ ನಾಯಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಪುರಸಭೆ ಸದಸ್ಯ ಸೈಯದ್ ಮೈನುದ್ದಿನ್ ಮುಲ್ಲಾ ಇತರರು ಇದ್ದರು.