ಬಿಜೆಪಿಯ 40% ಕಮಿಷನ್ ತನಿಖೆಯಿಂದ ಗೊತ್ತಾದರೆ ಕಠಿಣ ಕ್ರಮ – ಸಿಎಂ ಸಿದ್ದರಾಮಯ್ಯ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಬಿಜೆಪಿ ಸರ್ಕಾರದ ಬಗ್ಗೆ 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆ ಮಾಡಲು ಆಯೋಗ ರಚನೆ ಮಾಡಲಾಗಿದೆ. ತಪ್ಪಿತಸ್ಥರು ಎಂದು ಗೊತ್ತಾದರೆ ಖಂಡೀತವಾಗಿ ಖಠಿಣ ಕ್ರಮ ಕೈಗೊಂಡು ರಾಜ್ಯವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ಕುಷ್ಟಗಿ-ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತದ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಏನು ಮಾಡಲಿಲ್ಲ. ಲೂಟಿ ಹೊಡಿತಾಯಿದ್ದರು. ಹಾಗಾಗಿ ರಾಜ್ಯ ಕಾಂಟ್ರ್ಯಾಕ್ಟ್ ಅಸೋಸಿಯೇಷನ್ ಅವರು ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದರು. ಇದನ್ನು ತನಿಖೆ ಮಾಡಿಸಿ ಸಾಕ್ಷ್ಯಾ ಕೊಡುತ್ತೇವೆ ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಅವರು ಒಪ್ಪಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆ ಮಾಡಲು ಒಂದು ಆಯೋಗ ರಚನೆ ಮಾಡಲಾಗಿದೆ. ತನಿಖೆಯಿಂದ ತಪ್ಪಿತಸ್ಥರು ಎಂದು ಗೊತ್ತಾದರೆ ಖಂಡೀತವಾಗಿ ಖಠಿಣ ಕ್ರಮ ಕೈಗೊಂಡು ರಾಜ್ಯವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

5 ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ : ದೇಶದಲ್ಲಿ ಹತ್ತು ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ನಡೆಸಿದ ಆಡಳಿತದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಅಷ್ಟೇ ಅಲ್ಲದೆ ಅದರ ದೇಯೋದ್ಧೇಶಗಳನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಬಡವರಿಗೆ, ದಲಿತರಿಗೆ, ರೈತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಏನೇನು ಮಾಡಲಿಲ್ಲ. ಬೆಲೆ ಏರಿಕೆ, ಹಣದುಬ್ಬರದಿಂದ ಸಾಮಾನ್ಯ ಜನರ ಬದುಕು ದುಸ್ಥರವಾಗುವಂತೆ ಮಾಡಿದರು. ಇಂಥಾ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳ ಭರವಸೆ ನೀಡಲಾಯಿತು. ಸರ್ಕಾರ ಬಂದ ವರ್ಷದೊಳಗೆ ಜಾರಿ ಮಾಡಲಾಗಿತು. ಆದರೆ, ಬಿಜೆಪಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಚಾರ ಮಾಡಿದರು. ಗ್ಯಾರಂಟಿ ಯಶಸ್ವಿಯಾದಮೇಲೆ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಬಿಡುತ್ತಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತಿದ್ದಾರೆ. ಸುಳ್ಳು ಹೇಳಿ ದಾರಿತಪ್ಪಿಸಿ ನಂಬುವ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಇನ್ನೂ ನಾಲ್ಕು ವರ್ಷ ಗ್ಯಾರಂಟಿ ಯೋಜನೆಗಳನ್ನು ಒಂದು ತಿಂಗಳು ಕೂಡಾ ನಿಲ್ಲಿಸುವುದಿಲ್ಲ ಅದರ ಜೊತೆಗೆ ಪ್ರಕಟಿಸಲಾಗುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಇದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೇರುವ ಲೀಡರಗಳಿಲ್ಲ : ಕಾಂಗ್ರೆಸ್ ನುಡಿದಂತೆ ನಡೆದಿದೆ, ಬಿಜೆಪಿ ನುಡಿದಂತೆ ನಡೆದಿದೆಯೇ? ನಾವು ಸತ್ಯವನ್ನು ಹೇಳುತ್ತೇವೆ ಈ ಲೋಕಸಭಾ ಚುನಾವಣೆ ಸುಳ್ಳು ಮತ್ತು ಸತ್ಯಗಳ ನಡುವೆ ನಡೆದಿದೆ. ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸಲಿಲ್ಲ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸಲಿಲ್ಲ, ಅಗತ್ಯ ವಸ್ತುಗಳ ಬೆಲೆ ಇಳಿಸಲಿಲ್ಲ, ಅಚ್ಚೇದಿನ್ ಬರಲಿಲ್ಲ, ಎಲ್ಲಾ ಮಾಡುತ್ತೇನೆ ಎಂದು ಏನು ಮಾಡಲಿಲ್ಲ ಬರೀ ಸುಳ್ಳು ಹೇಳುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸುತಿದ್ದಾರೆ. ಇವಾಗ ಪ್ರಧಾನ ಮಂತ್ರಿ ಹುದ್ದೆ ಏರುವಂತಹ ಪ್ರಭಾವಿಗಳು ಯಾರೂ ಇಂಡಿಯಾದಲ್ಲಿ ಕಾಂಗ್ರೆಸ್ನಲ್ಲಿಲ್ಲಾ ಎಂದು ಹೇಳುತಿದ್ದಾರೆ. ಒಂದುವೇಳೆ ಪ್ರಧಾನಮಂತ್ರಿಯಾದರೆ ಎರಡ್ಮೂರು ಜನ ಪ್ರಧಾನಮಂತ್ರಿಗಳು ಬದಲಾವಣೆಯಾಗುತ್ತಾರೆ ಎಂದು ಇಡೀ ದೇಶದಲ್ಲಿ ಸುಳ್ಳು ಹೇಳಿಕೊಂಡು ನರೇಂದ್ರ ಮೋದಿ ಅವರು ತಿರುಗಾಡುತಿದ್ದಾರೆ. 55 ವರ್ಷ ದೇಶವಾಳಿದ ಕಾಂಗ್ರೆಸ್ನಲ್ಲಿ ಲೀಡರ್ ಇಲ್ಲ ಎಂದು ಹೇಳುತ್ತಿರುವುದು ಅತ್ಯಂತ ಕೆಟ್ಟ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗಿಂತ ಯಾವುದರಲ್ಲಿ ಕಡಿಮೆಯಿದ್ದಾರೆ, ರಾಹುಲ್ ಗಾಂಧಿ ಯಾವುದರಲ್ಲಿ ಕಡಿಮೆಯಿದ್ದಾರೆ ಕಾಂಗ್ರೆಸ್ನಲ್ಲಿ ಜಾಸ್ತಿ ಲೀಡರಗಳಿದ್ದಾರೆ’ ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೇರುವ ಲೀಡರಗಳೇಯಿಲ್ಲ ಪ್ರಧಾನಮಂತ್ರಿ ಆಗುತಕ್ಕಂತವರೇಯಿಲ್ಲ ಎಂದು ಗುಡುಗಿದರು.

2008 ರಿಂದ 2013ರ ವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಸದಾನಂದಗೌಡ, ಜಗಧೀಶ ಶೆಟ್ಟರ್ ಈ ಮೂವರು ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದರು. 2013 ರಿಂದ 2018ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಸಂಪೂರ್ಣ ಐದು ವರ್ಷ ಒಬ್ಬನೇ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದೇನೆ. ದೇವರಾಜ ಅರಸು ಅವರ ನಂತರ ಐದು ವರ್ಷ ಯಾರಾದರು ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣ ಮಾಡಿದ್ದರೆ ನಾನೊಬ್ಬನೇ ಎಂದು ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದರು.

ಬಿಜೆಪಿ ಮೀಸಲಾತಿ ವಿರೋಧಿ : ಕರ್ನಾಟಕ ರಾಜ್ಯದ ಗ್ಯಾರಂಟಿಗಳ ಯಶಸ್ಸು ಕಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈ ಇಬ್ಬರೂ ಕೂಡಾ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಹಿಳೆಗೆ ಕುಟುಂಬ ನಿರ್ವಹಣೆಗೆ ವರ್ಷಕ್ಕೆ ₹1 ಲಕ್ಷ ಕೊಡಲು ರುಜು ಮಾಡಿದ್ದಾರೆ. ರಾಜ್ಯದ್ದು ಸೇರಿ ವರ್ಷಕ್ಕೆ ₹1ಲಕ್ಷ 24 ಸಾವಿರ ಸಿಗಲಿದೆ. ಜೊತೆಗೆ ನಿರುದ್ಯೋಗ ಯುವಕರಿಗೆ ₹1 ಲಕ್ಷ, ರೈತರ ಎಲ್ಲಾ ಸಾಲಮನ್ನ ಮಾಡಲಿದ್ದಾರೆ. ಆದರೆ, ನರೇಂದ್ರ ಮೋದಿ ಪ್ರವಾಹ ಬಂದಾಗ, ಬರಗಾಲ ಬಂದಾಗ ಭೇಟಿ ನೀಡಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ. ಬಂಡವಾಳ ಶಾಯಿಗಳು, ಕೈಗಾರಿಕೋಧ್ಯಮಿಗಳ ₹16 ಲಕ್ಷ ಕೋಟಿ ಸಾಲಮನ್ನಾ ಮಾಡಿದರು. ಚುನಾವಣೆ ಬಂದಾಗ ಕರ್ನಾಟಕ ನೆನಪಿಗೆ ಬರುತ್ತದೆ. ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೆ ಬರಲು ಪ್ರಯತ್ನಿಸುತಿದ್ದು, ಆ ಪ್ರಯತ್ನವನ್ನು ಮತದಾರರು ವಿಫಲಗೊಳಿಸಬೇಕು ಆ ಶಕ್ತಿ ತಮ್ಮಲ್ಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೀವಿ. ಎಲ್ಲಾ ಬೆಳೆಗಳಿಗೂ MSP ಕೊಡುವ ಕಾನೂನು ಕೂಡಾ ಮಾಡಲಾಗುತ್ತೆ. ಪ್ರತಿಯೊಬ್ಬರಿಗೆ ₹25 ಲಕ್ಷ ವಿಮೆ ಕೊಡುವುದು, ಸಾಮಾಜಿಕ ನ್ಯಾಯದಡಿ ಮೀಸಲಾತಿ ಕೊಡಲು ಜಾತಿ ಗಣತಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ಬಿಜೆಪಿಯವರು ಮೀಸಲಾತಿ ವಿರೋಧಿಗಳಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನೀಡಿದಾಗ ಬಿಜೆಪಿ ವಿರೋಧ ಮಾಡಿದೆ. ಈ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ವಿರೋಧ ನಾವು ಮಾಡುವುದಿಲ್ಲ ಎಂದು ಹೇಳುತಿದ್ದು, ಜನ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಿಜೆಪಿ ಸುಳ್ಳನ್ನು ಉತ್ಪಾದನೆ ಮಾಡುವ ಒಂದು ಫ್ಯಾಕ್ಟರಿ, ಸುಳ್ಳೇ ಬಿಜೆಪಿಯವರ ಮನೆ ದೇವರು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯಲಿದೆ. ಸತ್ಯವನ್ನು ಹೇಳುವ ಕಾಂಗ್ರೆಸ್ ಪಕ್ಷಕ್ಕೆ ಜನ ಓಟು ಹಾಕಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಬೇಕು ಎಂದು ಮತಯಾಚಿಸಿದರು.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಭೈರತಿ ಸುರೇಶ, ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ವಿಪ ಮಾಜಿ ಸಭಾಪತಿ ಸುದರ್ಶನ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಯಾವುದೇ ಕಾರಣಕ್ಕೂ ಇನ್ನೂ ನಾಲ್ಕು ವರ್ಷ 5 ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ. ಒಂದು ತಿಂಗಳು ಕೂಡಾ ನಿಲ್ಲಿಸುವುದಿಲ್ಲ ಅದರ ಜೊತೆಗೆ ಪ್ರಕಟಿಸಲಾಗುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಇದು ನಮ್ಮ ಗುರಿಯಾಗಿದೆ

                – ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.