ಉದ್ಯೋಗ ಕೊಡದ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಬೇಕೆನ್ನದೇ ಮತ್ತೇನನ್ನ ಹೇಳಬೇಕು? – ತಂಗಡಗಿ ಪ್ರಶ್ನೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಪ್ರತಿ ವರ್ಷ 2ಕೋಟಿ ಉದ್ಯೋಗ ಕೊಡುವುದಾಗಿ ಸುಳ್ಳು ಹೇಳಿದ ಮೋದಿ ಹೆಸರು ಕೂಗುವ ಯುವಕರ ಕಪಾಳಕ್ಕೆ ಹೊಡಿಯಿರಿ ಎನ್ನದೇ ಮತ್ತೇನನ್ನು ಹೇಳಬೇಕು ಎಂದು ಬಿಜೆಪಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಪ್ರಶ್ನಿಸಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ಕುಷ್ಟಗಿ-ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರ್ಷಕ್ಕೆ 2ಕೋಟಿ ಉದ್ಯೋಗ ಕೊಡುವುದಾಗಿ ಬಿಜೆಪಿ ಮಿತ್ರರು ಯುವಕರ ತಲೆ ಕೆಡಿಸಿದ್ದರು. ಯುವಕರು ಮೋದಿ ಮೋದಿ ಎಂದು ಟಣಟಣ ಕುಣಿಯುತಿದ್ದರು. ಅವರಿಂದ ಮತವನ್ನು ಪಡೆದರು. ಆದರೆ, ವರ್ಷಕ್ಕೆ ಎರಡೇ ಎರಡು ಉದ್ಯೋಗನೂ ಕೊಡಲಿಲ್ಲ. ಉದ್ಯೋಗ ಕೊಡಿ ಎಂದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಪಕೋಡಾ ಮಾರಲು ಹೋಗಿ ಎಂದು ಹೇಳಿದರು. ಅದೇ ವಿಚಾರವಾಗಿ ಯುವಕರಿಗೆ, ಸಹೋದರರಿಗೆ ಮೋದಿ ಮೋದಿ ಅನ್ನಬೇಡಿ ಮೋದಿ ಅನ್ನುವ ಮಿತ್ರರಿಗೆ ಕರೆದು ಬುದ್ದಿ ಹೇಳಿರಿ ಎಂದೆ’ ಬಿಜೆಪಿಯವರು ನಿಂತ ನಿಂತಲ್ಲೇ ತಂಗಡಗಿ ಮೋದಿಯಂದವರಿಗೆ ಕಪಾಳಕ್ಕೆ ಹೊಡಿಯಿರಿಯಂದ ಅಂದರು. ಕೆಲಸ ಕೊಡುವುದಾಗಿ ಹೇಳಿ ಕೆಲಸ ಕೊಡದಿದ್ದರೆ ಮತ್ಯಾರಿಗೆ ಹೊಡೆಯಬೇಕು. ನಿಮಗೆ ತಾಖತ್ ಇದ್ದರೆ ಉದ್ಯೋಗ ಕೊಟ್ಟಿದ್ದನ್ನ ನಮಗೆ ಲಿಸ್ಟ್ ಕೊಡಿ ನೀವೇಳಿದ್ದು ಕೇಳುತ್ತೇವೆ. ಇಲ್ಲ ಮೇ 7 ರಂದು ಮತ ಹಾಕುವ ಮುಖಾಂತರ ನಿಮ್ಮ ಕಪಾಳಕ್ಕೆ ಹೊಡಿಯುವ ಕೆಲಸ ಮಾಡುತ್ತೇವೆ ಎಂದ ಸಚಿವ ಶಿವರಾಜ ತಂಗಡಗಿ, ಜನಾರ್ಧನ ರೆಡ್ಡಿ ಅವರೇ ಮೊನ್ನೆ ಮೋದಿ ಮೋದಿ ಹೆಸರೇಳಿ ಕಪಾಳಕ್ಕೆ ಹೊಡೆಯಬೇಕು ಎಂದಿದ್ದೀರಿ ಜನ ಮತ ಹಾಕುವ ಮುಖಾಂತರ ಯಾರಿಗೆ ಹೊಡೆಯುತ್ತಾರೆ ಎಂಬುದನ್ನ ನೋಡಿಯೇಬಿಡೋಣ ಎಂದು ಸವಾಲು ಹಾಕಿದರು.

ಕಪ್ಪು ಹಣ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಣ, 100 ಸ್ಮಾರ್ಟ್ ಸಿಟಿ ನಿರ್ಮಾಣ, ಬುಲೇಟ್ ಟ್ರೇನ್, ಐದು ವರ್ಷದ ಹಿಂದಿನ ಪುಲ್ವಾಮಾ ದಾಳಿ, 400kg RDX ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ಏನಾಯ್ತು? ಈ ಪ್ರಶ್ನೆಗಳಿಗೆ ಮೋದಿಯವರು ಹಾಗೂ ಈ ಕ್ಷೇತ್ರದ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಉತ್ತರ ಕೊಡಬೇಕು ಇಲ್ಲವೇ ಮೋದಿಯವರಿಗಿಂತ ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾಗಿರುವ ಜನಾರ್ಧನ ರೆಡ್ಡಿ ತಾಖತ್ ಇದ್ದರೆ ಉತ್ತರ ಕೊಡಬೇಕು ಇಲ್ಲದಿದ್ದರೆ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಉತ್ತರ ನೀಡಲಿ ಎಂದು ತಂಗಡಗಿ ಟೀಕಿಸಿದರು.

ಈ ವೇಳೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಸಚಿವ ಭೈರತಿ ಸುರೇಶ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಶರಣೇಗೌಡ ಬಯ್ಯಾಪೂರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಸೇರಿದಂತೆ ಅನೇಕ ಮುಖಂಡರು ಇದ್ದರು.