– ಕಾಂಗ್ರೆಸ್ಸಿನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ : ಭಾರತಿ ನಿರಗೇರಿ..!

 

 

ಕೊಪ್ಪಳ : ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ನಾಯಕಿ ಭಾರತಿ ನಿರಗೇರಿ ಅವರು ತಿಳಿಸಿದ್ದಾರೆ. 

ಕುಷ್ಟಗಿ ಪಟ್ಟಣದ ಹಳೇ ಪ್ರವಾಸ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆಯೇ ಇಲ್ಲ, ಸುಳ್ಳುಗಾರರು ಮೋಸಗಾರರಿಗೆ ಮಾತ್ರ ಅಲ್ಲಿ ಮಣೆ ಹಾಕಲಾಗುತ್ತದೆ. ಕಳೆದ ಮೂರು ವರ್ಷಗಳ ಕಾಲ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದೆ. ಆದರೆ, ಸಿಕ್ಕಿದ್ದು ಅಗೌರವ, ಅಲಕ್ಷ್ಯತನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ನನ್ನ ಸೇವೆಗೆ ಪಕ್ಷದ ಹಿರಿಯರು ರಾಜ್ಯ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಬಳಿಕ ಖುಷಿಯಿಂದ ಮತ್ತಷ್ಟು ಪಕ್ಷದ ಸಂಘಟನೆ ಕಾರ್ಯಗಳಲ್ಲಿ ತೊಡಗಿದೆಯಾದರೂ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಸೇರಿ ಸ್ಥಳೀಯ ಮುಖಂಡರಿಂದ ಸಹಕಾರ ಸಿಗಲಿಲ್ಲ. ಕೊನೆ ಕೊನೆಗೆ ಪಕ್ಷದ ಯಾವುದೇ ಕಾರ್ಯಕ್ರಮಗಳಿರಲಿ ಮಾಹಿತಿ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದೆ. ಅವರು ತಮ್ಮನ್ನು ಸ್ಥಳೀಯ ಪಕ್ಷದ ಕೂಡ ಆದೇಶ ಹೊರಡಿಸಿದರು. ಆದರೆ ಸ್ಥಳೀಯ ಮುಖಂಡರು ಅವರ ಆದೇಶಕ್ಕೆ ಬೆಲೆಯೇ ನೀಡಲಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರರ ಗಮನಕ್ಕೆ ತಂದರೂ ಯಾವುದೇ ಕ್ರಮ ತಗೆದುಕೊಳ್ಳಲಿಲ್ಲ. ಇದರಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆ ಎಂದು ಹೇಳಿದರು.
ಆಧ್ಯಾತ್ಮಿಕ ಕ್ಷೇತ್ರ ಸೇವೆ: ರಾಜೀನಾಮೆ ಹಿಂದೆ ನನ್ನ ಯಾವುದೇ ಸ್ವಾರ್ಥ ರಾಜಕಾರಣ ಅಡಗಿಲ್ಲ. ಇನ್ಮುಂದೆ ಯಾವುದೇ ಪಕ್ಷದಲ್ಲಿ ಸೇರ್ಪಡೆಗೊಳ್ಳದೆ ರಾಜಕೀಯ ಕ್ಷೇತ್ರವನ್ನೇ ತೊರೆದು, ಈ ಮುಂಚೆ ತಾವು ಆಸಕ್ತಿ ಹೊಂದಿದ್ದ ಆಧ್ಯಾತ್ಮಿಕ ಕ್ಷೇತ್ರದ(ಬಸವ ತತ್ವ ಚಿಂತನೆ)ಲ್ಲಿಯೇ ಸೇವೆ ಮುಂದುವರಿಸುವೆ ಎಂದು ಭಾರತಿ ನಿರಗೇರಿ ಅವರು ಸ್ಪಷ್ಟಪಡಿಸಿದರು.

(ಶರಣಪ್ಪ ಕುಂಬಾರ)