– ಶರಣಪ್ಪ ಕುಂಬಾರ.
ಕೊಪ್ಪಳ : ಕಳೆದ ವರ್ಷ ತೋಳ ದಾಳಿಗೆ ತುತ್ತಾದವರ ಪೈಕಿ ಸಂಪೂರ್ಣ ಮುಖವನ್ನು ಹಾಳುಮಾಡಿಕೊಂಡ ಮಹಿಳೆಗೆ ಪರಿಹಾರ ನೀಡಲು ಮುಂದಾದ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿದ್ದು 5 ಲಕ್ಷ ರೂಪಾಯಿಗಳನ್ನು ಆದರೆ, ನೀಡಿದ್ದು 64443=00 ರೂಪಾಯಿಗಳು ಮಾತ್ರ..!
ತೋಳ ದಾಳಿಯಿಂದ ತನ್ನ ಮೂಗು ಕಳೆದುಕೊಂಡು, ಐದಾರು ಶಸ್ತ್ರಚಿಕಿತ್ಸೆಗಳ ಮೂಲಕ ಬದುಕುಳಿದು ನತದೃಷ್ಟ ಬಡ ಮಹಿಳೆ ಕಣ್ಣು ಹಾಗೂ ಮೆದುಳಿನ ಸಮಸ್ಯೆಯಿಂದ ನಿತ್ಯ ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾಳೆ. ಮಹಿಳೆಗೆ ನೀಡಿದ ಪರಿಹಾರ ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸೂಕ್ತ ಪರಿಹಾರಕ್ಕಾಗಿ ಬರೆಯಲಾಗಿತ್ತು. ಆದರೆ, ವೈಲ್ಡ್ ಲೈಫ್ ನಿಯಮ ತೊಡಕಾಗಿರುವ ಕಾರಣದಿಂದ 50 ಸಾವಿರ ರೂಪಾಯಿಗಳ ಪರಿಹಾರಕ್ಕೆ ಒಪ್ಪಿಕೊಳ್ಳಬೇಕಾಗಿದೆ. ಕೊಪ್ಪಳದ ಜಿಲ್ಲಾ ಆಸ್ಪತ್ರೆ ವೈದ್ಯರು ನೀಡಿರುವ ವರದಿಯಿಂದ ಅತ್ಯಂತ ಕಡಿಮೆ ಪರಿಹಾರಕ್ಕೆ ಕಾರಣವೆನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಮಹಿಳೆ ಸೇರಿದಂತೆ ತೋಳ ದಾಳಿಯಿಂದ ಗಾಯಗೊಂಡ ಇನ್ನಿತರ 19 ಜನರಿಗೆ ಗರಿಷ್ಟ 50 ಸಾವಿರ ರೂಪಾಯಿಗಳ ಪರಿಹಾರ ನೀಡುಬೇಕು ಎಂಬ ಸುತ್ತೋಲೆ ಇದ್ದರೂ ಕೂಡಾ 20 ರಿಂದ 30 ಸಾವಿರ ರೂಪಾಯಿಗಳ ಪರಿಹಾರ ನೀಡಿ, ಕೈ ತೊಳೆದುಕೊಂಡ ಅರಣ್ಯ ಇಲಾಖೆ ದಾಳಿಗೆ ತುತ್ತಾದವರ ಕೆಂಗಣ್ಣಿಗೆ ಗುರಿಯಾಗಿದೆ. ಅರಣ್ಯ ಇಲಾಖೆ ಕೂಡಲೇ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕು ಇಲ್ಲವಾದಲ್ಲಿ ಕುಷ್ಟಗಿ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳುವುದಾಗಿ ತೊಳ ದಾಳಿಯಿಂದ ಗಾಯಗೊಂಡ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ..!!