ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಹೆರಿಗೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಇದಕ್ಕೆ ವೈದ್ಯಾಧಿಕಾರಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಸಾರ್ವಜನಿಕರು ತೀವ್ರ ಫ್ರತಿಭಟನೆ ಕೈಗೊಂಡಿದ್ದಾರೆ.
ಪಟ್ಟಣದ 18ನೇ ವಾರ್ಡ್ ವಿಠಲಾಪೂರದ ಲಕ್ಷ್ಮೀ ನೇಮಿನಾಥ ಮುಗದುಮ್ (20) ಎಂಬ ಮೃತ ದುರ್ದೈವಿ ಗರ್ಭಿಣಿ ಮಹಿಳೆ. ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ ಲಕ್ಷ್ಮೀ ನೇಮಿನಾಥ ಪ್ರಥಮ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮಹಿಳಾ ವೈದ್ಯಾಧಿಕಾರಿ ಡಾ.ಕಾವೇರಿ ಶಾವಿ ಅವರು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯನ್ನು ನಿರ್ಲಕ್ಷ್ಯ ವಹಿಸಿದ ಕಾರಣ ಮಗು ಸಮೇತ ಗರ್ಭಿಣಿ ಸಾವನ್ನಪ್ಪಿದ್ದಾಳೆ. ವೈದ್ಯಾಧಿಕಾರಿ ಡಾ.ಕಾವೇರಿ ಶಾವಿ ಅವರ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶಕ್ಕೊಳಗಾದ ಸಾವನ್ನಪ್ಪಿದ ಗರ್ಭಿಣಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಮಂಗಳವಾರ ರಾತ್ರಿಯಿಂದ ಆಸ್ಪತ್ರೆ ಆವರಣದಲ್ಲಿ ಧರಣಿ ಕುಳಿತು ಗರ್ಭಿಣಿ ಸಾವಿಗೆ ಕಾರಣಳಾದ ವೈದ್ಯೆ ಕಾವೇರಿ ಅವರನ್ನು ಕೂಡಲೇ ಕರ್ಯವ್ಯದಿಂದ ಶಾಶ್ವತ ವಜಾ ಮಾಡಬೇಕು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.
ಇಂದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಡಿ.ಎಚ್.ಒ. ಹಾಗೂ ಟಿ.ಎಚ್.ಒ. ಪ್ರತಿಭಟನಾ ನಿರತರಿಗೆ ಈ ಕುರಿತು ವಿಚಾರಣೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಪ್ರತಿಭಟನೆ ಹಿಂಪಡೆಯುವಂತೆ ಮನ ಒಲಿಸಲು ಮುಂದಾದರು. ಅದಕ್ಕೆ ಒಪ್ಪದ ಸಾರ್ವಜನಿಕರು, ಸಂಘಟನೆಗಾರರು ವೈದ್ಯೆ ಕಾವೇರಿ ಅವರಮೇಲೆ ಅನೇಕ ಆರೋಪಗಳಿವೆ ಸಾಕಷ್ಟು ಮನವಿ ಪತ್ರ ಮೂಲಕ ದೂರು ನೀಡಲಾಗಿದೆ. ಆದರೆ, ಈವರೆಗೂ ಮೇಲಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅವರನ್ನು ಅಮಾನತ್ತು ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.
ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಹೆರಿಗೆ ಸೇರಿದಂತೆ ಪ್ರತಿಯೊಂದಕ್ಕೂ ಹಣ ಸುಲಿಗೆ ಮಾಡುತಿದ್ದಾರೆ. ವ್ಯವಸ್ಥೆ ಸರಿಪಡಿಸಬೇಕು, ಗರ್ಭಿಣಿ, ಮಗು ಸಾವಿಗೆ ಕಾರಣಳಾದ ವೈದ್ಯಾಧಿಕಾರಿಯನ್ನು ಅಮಾನತ್ತು ಮಾಡಬೇಕು ಇಲ್ಲದಿದ್ದರೆ 18ನೇ ವಾರ್ಡ ವಿಠಲಾಪೂರನಿಂದ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಪ್ರತಿಭಟನಾ ನಿರತ ವಿವಿಧ ಸಂಘಟನೆಗಳು, ಸಾರ್ವಜನಿಕರು ಧರಣಿ ಮುಂದುವರೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಸಿದ್ದನಗೌಡ, ಸಿಪಿಐ ಯಶವಂತ ಬಿಸನಳ್ಳಿ ಹಾಗೂ ತಹಸೀಲ್ದಾರ್ ರವಿ ಎಸ್. ಅಂಗಡಿ ತಮ್ಮ ಬೇಡಿಕೆಯಂತೆ ಕೂಡಲೇ ಕ್ರಮವಹಿಸಿ ಡಾ.ಕಾವೇರಿ ಅವರು ಕಡ್ಡಾಯ ರಜೆ ತೆಗೆದುಕೊಳ್ಳಲು ಹಾಗೂ ಮರಳಿ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜಿಸದಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಅಧಿಕಾರಿಗಳು ತನಿಖೆ ಮಾಡಿ ಕ್ರಮಕೈಗೊಳ್ಳುತ್ತಾರೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.