ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಮೇ 1 ಬುಧವಾರ ತಾ.ಪಂ. ತಾಲೂಕು ಸ್ವಿಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯಂದು ಗ್ರಾಮಸ್ಥರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ತಾಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ ಅವರು ಕೇಕ್ ಕತ್ತರಿಸುವ ಮುಖಾಂತರ ನರೇಗಾ ಕೂಲಿಕಾರ್ಮಿಕರಿಗೆ ಸಿಹಿ ಹಂಚಿ ಸ್ವಾಗತಿಸಿದರು. ಬಳಿಕ ನಮ್ಮ ನಡೆ ಮತಗಟ್ಟೆಯ ಕಡೆ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬರಗಾಲ ದಿನಗಳಲ್ಲಿ ನರೇಗಾ ಯೋಜನೆ ಆಶಾಕಿರಣವಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಈ ಯೋಜನೆಯನ್ನು ಸರ್ಕಾರ 2005 ರಲ್ಲಿ ಜಾರಿಗೆ ತಂದಿದೆ. ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ನರೇಗಾ ಯೋಜನೆಯಲ್ಲಿದೆ. ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು. ಸಾಕಷ್ಟು ಕಾರ್ಮಿಕರ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತ್ತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು. ಇದೇ ವೇಳೆ ಐದು ಬಡ ಕುಟುಂಬಗಳಿಗೆ ದೈನಂದಿನ ಬಳಕೆಯ ಅಗತ್ಯ ವಸ್ತುಗಳನ್ನು ಕೂಲಿಕಾರ್ಮಿಕರ ವತಿಯಿಂದ ವಿತರಿಸಲಾಯಿತು.
ಬಳಿಕ ಆರಂಭಗೊಂಡ ನಮ್ಮ ನಡೆ ಮತಗಟ್ಟೆಯ ಕಡೆ ಜನಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರು ಸೇರಿದಂತೆ ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಬುನಾದಿ ಸದೃಢಗೊಳಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ವೇಳೆ ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ವಿ. ಹೀರೆಹಾಳ, ಟಿ ಸಿ ಬಸವರಾಜ, ಐ ಇ ಸಿ ಸಂಯೋಜಕ ಚಂದ್ರಶೇಖರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಿರೇಮಠ, ಸರ್ ಟಿ ಎ ಇ ಗುರುಲಿಂಗಪ್ಪ ಅಂಗಡಿ, ಕರವಸೂಲಿಗಾರ ಶರಣಪ್ಪ ಕುರುಮನಾಳ, ಕಂಪ್ಯೂಟರ್ ಆಪರೇಟರ್ ಮಂಜುನಾಥ ಸಿ.ಕೆ, ಬಿ ಎಫ್ ಟಿ ಯಮನೂರಪ್ಪ, ಗ್ರಾಮ ಕಾಯಕ ಮಿತ್ರ ಕವಿತಾ ಪೂಜಾರ, ಬಸವರಾಜ್ ನೀರಾವರಿ ಸೇರಿ ಅನೇಕ ನೆರೆಗಾ ಕೂಲಿ ಕಾರ್ಮಿಕರು ಇದ್ದರು.