ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಮಹಿಳೆಯರ ಮೇಲೆ ಶೌಚಾಲಯ ಗೋಡೆ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಭಾನುಬೇಗಂ ಖಾಜಿ (40), ಉಮಾಬಾಯಿ ಬಪ್ಪರಗಿ (36) ಮೃತ ದುರ್ದೈವಿಗಳು, ಒರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತೀವ್ರ ಗಾಯಗೊಳಗಾಗಿದ್ದ ಮತ್ತೋರ್ವ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿಳೆ ಎಂದು ತಿಳಿದು ಬಂದಿದೆ. ಮತ್ತಿಬ್ಬರಿಗೆ ಗಾಯಗಳಾಗಿವೆ.
ಶಿಥಿಲಾವಸ್ಥೆಯಲ್ಲಿದ್ದ ಮಹಿಳಾ ಶೌಚಾಲಯವನ್ನು ಯಾರೂ ಉಪಯೋಗಿಸದಂತೆ ಪಟ್ಟಣ ಪಂಚಾಯಿತಿ ನಿಷೇಧಿಸಿತ್ತು. ಜೊತೆಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ನೆನೆದಿತ್ತು. ಯಾರೂ ಹೋಗದ ಹಳೇ ಕಟ್ಟಡದಲ್ಲಿ ರಾತ್ರಿ ವೇಳೆ ಮಹಿಳೆಯರು ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಕಟ್ಟಡದ ಗೋಡೆ ಏಕಾಏಕಿ ಕುಸಿದುಬಿದ್ದು ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ರಾತ್ರಿ ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋಧಾ ವಂಟಿಗೋಡಿ, ಡಿವೈಎಸ್ಪಿ, ಸಿಪಿಐ ಯಶವಂತ ಬಿಸನಳ್ಳಿ, ತಹಸೀಲ್ದಾರ್ ರವಿ ಎಸ್. ಅಂಗಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಬಿಸಾಬ ಕುದನವರ, ಪಿಎಸ್’ಐ ಸುಜಾತಾ ನಾಯಕ, ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಸೇರಿದಂತೆ ಕಂದಾಯ ಇಲಾಖೆ ನೌಕರರು ಭೇಟಿನೀಡಿ ಪರಿಶೀಲಿಸಿದರು.
ಪರಿಹಾರ : ಜಿಲ್ಲಾಧಿಕಾರಿಗಳು ಮೃತ ಮಹಿಳೆಯರಿಬ್ಬರ ಕುಟುಂಬಸ್ಥರಿಗೆ ಸ್ಥಳದಲ್ಲೇ ತಲಾ ₹5 ಲಕ್ಷ ಮೊತ್ತದ ಚೆಕ್ ಹಾಗೂ ಗಾಯಗೊಂಡವರಿಗೆ ₹16 ಸಾವಿರ ಮತ್ತದ ಪರಿಹಾರ ಚೆಕ್ ವಿತರಿಸಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.