ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ, ಸಮಸ್ಯೆಗಳಿಗಾಗಿ ಸದನದಲ್ಲಿ ಧ್ವನಿಯಾಗಲು ಈಶಾನ್ಯ ಪಧವೀಧರ ಕ್ಷೇತ್ರದಿಂದ ಸ್ಪರ್ಧೆಯೊಡ್ಡಿರುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಿ ಎಂದು ಪಧವೀಧರ ಬಿಜೆಪಿ ಕಾರ್ಯಕರ್ತರಿಗೆ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.
ಅವರು ಪಟ್ಟಣದ ಬಿಜೆಪಿ ಪಕ್ಷದ ಅಂಜನಾದ್ರಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಪರ ಮತ ಯಾಚಿಸಿ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಹೋದವರು ಅವಧಿ ಮುಗಿಯುವವರೆಗೂ ಕೊಪ್ಪಳ ಜಿಲ್ಲೆಗೆ ತಿರುಗಿಯೂ ನೋಡಲಿಲ್ಲ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿಯಾಗಲಿಲ್ಲ. ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರು 2012 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ 371 ಜೆ ಅನುಷ್ಠಾನಕ್ಕಾಗಿ, ಈ ಭಾಗದ ಎಲ್ಲಾ ಪಧವೀಧರರ ಅನೇಕ ಸಮಸ್ಯೆಗಳಿಗೆ, ಅಭಿವೃದ್ಧಿ ಕೆಲಸ ಕಾರ್ಯಗಳ ಕುರಿತು ಚರ್ಚೆ ಮಾಡಿ ಮುಖ್ಯಮಂತ್ರಿಗಳ ಆದಿಯಾಗಿ ಕೆಲಸ ಮಾಡಿದ್ದಾರೆ ಜೊತೆಗೆ ಕೆಕೆಆರ್’ಡಿಬಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಪಧವೀಧರ ಬಿಜೆಪಿ ಕಾರ್ಯಕರ್ತರು ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಹಾಕಿಸಬೇಕು ಜೊತೆಗೆ ಎರಡನೇ ಪ್ರಾಶಸ್ತ್ಯದ ಮತ ಹಾಕಿಸುವಲ್ಲಿ ಶ್ರಮಿಸಬೇಕು ಎಂದು ವಿನಂತಿ ಮಾಡಿದ ಶಾಸಕ ದೊಡ್ಡನಗೌಡರು,
ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತ ಚಲಾವಣೆಯಲ್ಲಿ ಯಾವುದೇ ಪ್ರಮಾದ ಆಗದಂತೆ 1 ರ ಸಂಖ್ಯೆಯನ್ನು ಮಾತ್ರ ಬರೆದು ಮತ ಹಾಕಲು ತಿಳಿಸಬೇಕು. 1 ರ ಸಂಖ್ಯೆ ಹೊರತು ಪಡಿಸಿ ರೈಟ್, ಸ್ವಸ್ತಿಕ್ ಇತರೆ ಯಾವುದೇ ಚಿನ್ಹೆ ಬರೆದು ಮತ ಚಲಾಯಿಸಿದರೆ ಅದು ಅನರ್ಹವಾಗುತ್ತದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಿ ಈ ವಿಷಯದಲ್ಲಿ ಜಾಗೃತಿ ವಹಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳುಗಣ್ಣವರ ಮಾತನಾಡಿ, ಈ ಭಾಗದ ಪಧವೀಧರ ಅಭ್ಯರ್ಥಿಗಳ ನೇಮಕಾತಿಯಿಂದ ಹೈಕ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ನೇಮಕಾತಿ ತಡೆ ಹಿಡಿಯಲು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅನ್ಯಾಯ ಎಸಗುತಿದ್ದಾರೆ. 371 ಜೆ ಕಲಂ ವಿಶೇಷ ಸ್ಥಾನಮಾನದಡಿ ಈ ಭಾಗದ ಅಭ್ಯರ್ಥಿಗಳ ನೇಮಕಾತಿಯಲ್ಲಿನ ಅನ್ಯಾಯದ ವಿರುದ್ಧ, ಸದನದಲ್ಲಿ ಧ್ವನಿಯಾಗಲು, ಪ್ರತಿಭಟಿಸಲು ಅಮರನಾಥ ಪಾಟೀಲ್ ಅವರ ಅಗತ್ಯವಿದೆ. ಪಧವೀಧರ ಬಿಜೆಪಿ ಕಾರ್ಯಕರ್ತರು ಅವರನ್ನು ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಪಧವೀಧರ ಮತದಾರರಿಂದ ಮೊದಲ ಪ್ರಾಶಸ್ತ್ಯದ ಮತ ಹಾಕಿಸುವ ಮೂಲಕ ಚುನಾಯಿಸಿ ಕಳುಹಿಸುವಲ್ಲಿ ದುಡಿಯಬೇಕು ಎಂದು ಕೋರಿದರು.
ಅಭ್ಯರ್ಥಿ ಅಮರನಾಥ ಪಾಟೀಲ್ ಅವರು ಮಾತನಾಡಿ, ಈ ಹಿಂದೆ 2012ರಲ್ಲಿ ಸದಸ್ಯನಾಗಿ 6 ವರ್ಷಗಳ ಕಾಲ ನೂರಾರು ಬಾರಿ ಸದನದ ಬಾವಿಗಿಳಿದು ಈ ಭಾಗದ ಸಮಗ್ರ ಅಭಿವೃದ್ಧಿಗೆ, ಪಧವೀಧರರ ಸಮಸ್ಯೆಗಳಿಗೆ ಪ್ರತಿಭಟಿಸಿದ್ದೇನೆ. ಈ ಭಾಗದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಸಾಕಷ್ಟು ಅನುದಾನ ಬರುತ್ತಿದ್ದು, ಶೈಕ್ಷಣಿಕ ಅಭಿವೃದ್ಧಿಗೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಬಳಕೆಯಾಗಲು ಶ್ರಮಿಸುತ್ತೇನೆ. ಈ ಭಾಗಕ್ಕೆ ಆಗುತ್ತಿರುವ ತಾರತಮ್ಯ ವಿರುದ್ಧ ಸದನದಲ್ಲಿ ಧ್ವನಿಯಾಗುತ್ತೇನೆ ತಮ್ಮನ್ನು ಬೆಂಬಲಿಸಿ ಎಂದು ಮತಯಾಚನೆ ಮಾಡಿದರು.
ಕೊಪ್ಪಳ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು, ಅಮರನಾಥ ಪಾಟೀಲ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಜೊತೆಗೆ ತಮ್ಮ ಬಂಧುಗಳು, ಹಿತೈಷಿಗಳಿಂದ, ಸ್ನೇಹಿತರಿಂದ ಮತ ಹಾಕಿಸಬೇಕು ಎಂದು ಪಧವೀಧರ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ, ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಲೋಕಸಭಾ ಅಭ್ಯರ್ಥಿ ಬಸವರಾಜ್ ಕ್ಯಾವಟರ್, ಮಾಜಿ ಶಾಸಕ ಕೆ ಶರಣಪ್ಪ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.