ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಸರ್ಕಾರದಿಂದ ಬಿಡುಗಡೆಯಾದ ಬೆಳೆ ಹಾನಿ ಪರಿಹಾರ ಅಧಿಕಾರಿಗಳ ಯಡವಟ್ಟಿನ ಪರಿಣಾಮ ನೈಜ ರೈತನ ಖಾತೆಯ ಬದಲು ಬೇರೊಬ್ಬರ ಖಾತೆಗೆ ಜಮೆಯಾಗಿರುವ ವಿಷಯ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಕುಷ್ಟಗಿ ಹೋಬಳಿಯ ಸರ್ವೇ ನಂ. 277 ಹಿಸ್ಸಾ 2ರ 4 ಎಕರೆ ಜಮೀನಿನ ರೈತ ಶರಣಪ್ಪ ತಂ. ಹನುಮಂತಪ್ಪ ಚೂರಿ ಎಂಬುವರು ಬೆಳೆ ಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ. ಇವರು ಬೆಳೆ ಹಾನಿ ಪರಿಹಾರ ಪಡೆಯಲು ಅಗತ್ಯ ಸರಿಯಾದ ದಾಖಲೆಗಳನ್ನು ನೀಡಿ ತಂತ್ರಾಂಶ ದಲ್ಲಿ FID ಸಂಖ್ಯೆ ಹೊಂದಿದ್ದರು. ಆದರೆ, ಜನೇವರಿ ತಿಂಗಳಲ್ಲಿ ರಾಜ್ಯ ಸರ್ಕಾರ ಹಾಕಿದ ₹2000 ಪರಿಹಾರ ಧನ ರೈತನ ಖಾತೆಗೆ ಜಮಾ ಆಗದೇ ನಾಗರಾಜ ಎಂಬುವರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗಿರುವದನ್ನು ಅರಿತು ರೈತ ಶರಣಪ್ಪ ಚೂರಿ ದಂಗಾಗಿದ್ದಾನೆ.
ಈ ಕುರಿತು ಕುಷ್ಟಗಿ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ವಿಚಾರಿಸಿದಾಗ ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರವೂ ಸಹ ನಾಗರಾಜ ಎಂಬುವರ ಖಾತೆಗೆ ಜಮಾವಣೆಯಾಗಿರುವುದು ಗೊತ್ತಾಗಿದೆ. ನಿಮ್ಮ ದಾಖಲೆಗಳೊಂದಿಗೆ ಇನ್ನೊಬ್ಬರ ಖಾತೆಗೆ ಹಣ ಜಮಾವಣೆಯಾಗಿರುವ ವಿಷಯ ತಿಳಿಯದಾಗಿದ್ದು, ಈ ಕುರಿತು ವಿಚಾರಿಸುವುದಾಗಿ ಗ್ರಾಮ ಲೆಕ್ಕಾಧಿಕಾರಿ ಹೇಳಿ ಕಳುಹಿಸಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿರುವ ರೈತ ಶರಣಪ್ಪ ಚೂರಿ, ಅಧಿಕಾರಿಗಳ ಯಡವಟ್ಟಿನಿಂದ ತಮಗೆ ಅನ್ಯಾಯವಾಗಿದ್ದು, ಅಧಿಕಾರಿಗಳು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.