ಕುಷ್ಟಗಿ | ಅಬ್ಬರ ಮಳೆ, ಗಾಳಿಗೆ ನೆಲಕ್ಕುರುಳಿದ ಮರ, ವಿದ್ಯುತ್ ಕಂಬ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬಿರುಗಾಳಿ ಗುಡುಗು ಸಿಡಿಲು ಮಿಂಚು ಸಹಿತ ಆರ್ಭಟಿಸಿದ ಮಳೆಯಲ್ಲಿ ವಿದ್ಯುತ್ ಕಂಬ ಸೇರಿದಂತೆ ಮರಗಳು ನೆಲಕ್ಕುರುಳಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಮದಲಗಟ್ಟಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಪರಿವರ್ತಕ ಸಮೇತ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹಾಬಲಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ರಸ್ತೆ ಬದಿಯ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಹನಮಸಾಗರ ಸೀಮಾದಲ್ಲಿ ರೈತ ಮೊಹಮ್ಮದ್ ಸಿರಾಜುದ್ದೀನ್ ಮೂಲಿಮನಿ ಎಂಬುವರಿಗೆ ಸೇರಿದ ತೋಟದಲ್ಲಿನ ಮರಗಳು ಬಿದ್ದಿವೆ. ನರ್ಸರಿ ಪ್ಲಾಟ್ ಗಾಳಿ ಮಳೆಗೆ ಹಾನಿಯಾಗಿದೆ. ಆದರೆ, ಮನೆ ಹಾನಿ ಅಥವಾ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ.

ಕುರಿ ಸಾವು : ಹನುಮನಾಳ ಹೋಬಳಿಯಲ್ಲಿ ಮಳೆ ಗಾಳಿಗೆ ಎರಡು ಕುರಿಗಳು ಮೃತಪಟ್ಟ ಮಾಹಿತಿ ಲಭ್ಯವಾಗಿದೆ.