ಮುನೇತ್ರ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಪಟ್ಟಣದ ಆರಾಧ್ಯ ದೈವ ಪುರಾತನ ಶ್ರೀಅಡವಿ ಮುಖ್ಯಪ್ರಾಣೇಶ ದೇವರ(ಅಡವಿರಾಯ) ರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಸಿಂಗರಿಸಿದ ರಥದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ನೆರವೇರಿಸಲಾಯಿತು. ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮ, ಪಟ್ಟಣಗಳ ಸಹಸ್ರಾರು ಸಂಖ್ಯೆಯೆ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಜೈ ಶ್ರೀರಾಮ, ಜೈ ಅಡವಿರಾಯ.. ಜಯಘೋಷಗಳೊಂದಿಗೆ ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಅನೇಕ ನವದಂಪತಿ ಜೋಡಿಗಳು ರಥೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿರುವುದು ಕಂಡುಬಂದಿತು.
ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀಅಡವಿರಾಯನ ಜಾತ್ರೋತ್ಸವದಲ್ಲಿ ಬೆಳಗ್ಗೆ ದೇಗುಲದಲ್ಲಿ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಇತರೆ ಪೂಜೆಗಳು ಜರುಗಿದವು. ನಂತರ ರಥಾಂಗ ಹೋಮ, ಪವಮಾನ ಹೋಮ, ಸತ್ಯನಾರಾಯಣ ಪೂಜೆ ಇತರೆ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. ರಥೋತ್ಸವದ ನಂತರ ಹರಿವಾಣ ಸೇವೆ, ಪತ್ತಾ ಸೇವಾ ಕಾರ್ಯಕ್ರಮಗಳು ಜರುಗಿದವು.
ರಥೋತ್ಸವ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ದೇವಸ್ಥಾನ ಸೇವಾ ಕಮೀಟಿಯ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ಜಗನ್ನಾಥ ಕಿನ್ನಾಳ(ಚಿನ್ನಪ್ಪ), ಬಿಂದು ಮಾಧವ ಮುಂಗ್ಲಿ, ಕೆ.ವಿ. ಅಶ್ರಿತ್ ವಕೀಲರು, ಪ್ರಹ್ಲಾದಾಚಾರ್ ಸೌದಿ, ಹನುಮೇಶ ಡಬೇರ್, ಜಯತೀರ್ಥಚಾರ ಸೌದಿ, ಅಡಿವ್ಯಾಚಾರ ಮುಂಗಲಿ, ಗುಂಡಾಚಾರ ಹಂಜಕ್ಕಿ, ಪಾಂಡುರಂಗ ಆಶ್ರೀತ್ ಊರಿನ ಇತರ ಗಣ್ಯರು ಹಾಜರಿದ್ದರು.