ಕೊಪ್ಪಳ : ಜಿಲ್ಲೆಯ ಹಿರಿಯ ಹೋರಾಟಗಾರ, ಪತ್ರಕರ್ತ, ರಾಜಕಾರಣಿ, ಅಂಕಣಕಾರ ಹಾಗೂ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿ(೭೮) ಅವರು ಗುರುವಾರ ರಾತ್ರಿ ಭಾಗ್ಯನಗರದ ಅವರ ನಿವಾಸದಲ್ಲಿ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..!
ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು, ಹಲವು ವಿಚಾರಗಳ ಕುರಿತು ನೇರ ಹಾಗೂ ನಿಷ್ಠೂರತೆಯಿಂದ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲಾ ಹೋರಾಟದ ವಿಚಾರ, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು.
ಸುದೀರ್ಘ ಹೋರಾಟಮಯ ಜೀವನವೇ ಅವರದ್ದಾಗಿತ್ತು. ವಿವಿಧ ಪತ್ರಿಕೆಗಳಲ್ಲಿಯೂ ಪತ್ರಕರ್ತ, ಅಂಕಣಕಾರರಾಗಿ ಲೇಖನಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ರಾಜ್ಯ ಮಟ್ಟದಲ್ಲಿ ಇವರ ದೊಡ್ಡ ಸ್ನೇಹ ಬಳಗವನ್ನು ಹೊಂದಿದವರಾಗಿದ್ದರು.
ಬಡತನದಲ್ಲಿಯೇ ಜೀವನ ಸವೆಸಿದ್ದ ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರು ನೇಕಾರಿಕೆಯನ್ನು ಮಾಡಿದ್ದರು. ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿಯೂ ಧ್ವನಿ ಎತ್ತಿ ಸರ್ಕಾರ ಇತ್ತ ತಿರುಗಿ ನೋಡುವಂತೆ ಮಾಡಿದ್ದರು. ಇವರು ೪ನೇ ತರಗತಿ ಶಿಕ್ಷಣ ಪಡೆದರೂ ೨೦ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದರು. ಹಲವು ಕವನ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಕೃಷಿ ಮಾಡಿದ್ದರು. ಇವರ ಸಮಗ್ರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದ್ದವು.
೭೮ ರ ಇಳಿ ವಯಸ್ಸಿನಲ್ಲೂ ಯುವ ಉತ್ಸಾಹಿಗಳಂತೆ ನಗು ನಗುತ್ತಲೇ ಎಲ್ಲರೊಂದಿಗೆ ಬರೆತು ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದರು. ಸತ್ಸಂಗ, ಆಧ್ಯಾತ್ಮ, ವೈಚಾರಿಕತೆ ಇವರಲ್ಲಿ ಹಾಸುಹೊಕ್ಕಾಗಿತ್ತು. ಇವರು ರಾಜಕೀಯ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿ ಈ ಹಿಂದೆ ತಾಪಂ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಸೇವೆ ಮಾಡಿದ್ದರು. ಇವರು ಗುರುವಾರ ಸಂಜೆ ಆರೋಗ್ಯದಲ್ಲಿ ದಿಡೀರ್ ಏರುಪೇರಾಗಿ ಮೃತಪಟ್ಟಿದ್ದಾರೆ. ಇವರ ಅಗಲಿಕೆಯು ಇಡೀ ಸಾಹಿತ್ಯ ವಲಯಕ್ಕೆ, ಮಾಧ್ಯಮ ವಲಯಕ್ಕೆ, ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ವಿಠ್ಠಪ್ಪ ಗೋರಂಟ್ಲಿ ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಕೊಪ್ಪಳ ಮೀಡಿಯಾ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಸಾಹಿತ್ಯ ಬಳಗವು ಕಂಬನಿ ಮಿಡಿದಿದೆ..!
ಸುದ್ದಿ ಕೃಪೆ : ಚಾಮರಾಜ ಸವಡಿ, ಹಿರಿಯ ಪತ್ರಕರ್ತರು, ಕೊಪ್ಪಳ.