– ಶರಣಪ್ಪ ಕುಂಬಾರ.
ಕೊಪ್ಪಳ : ಅಭಿವೃದ್ಧಿ ಹೆಸರಿನಲ್ಲಿ ಬೇಕಾಬಿಟ್ಟಿ ಬಳಕೆಯಾಗುತ್ತಿದ್ದ ಜಿಲ್ಲಾ ಖನಿಜ ನಿಧಿ (ಡಿ.ಎಮ್.ಎಫ್) ಬಳಕೆಗೆ ಇನ್ನೂ ಕೇಂದ್ರ ಸರಕಾರ ವಿನೂತನ ಮಾರ್ಗದ ಮೂಲಕ ಅಡ್ಡಕತ್ತರಿ ಹಾಕಿದೆ..!
ವಿವಿಧ ಗಣಿಗಾರಿಕೆಗಳಿಂದ ಬಾಧೆಯಾಗಿರುವ ಪ್ರದೇಶಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಜಿಲ್ಲಾ ಖನಿಜ ನಿಧಿ ಬಳಕೆಗೆ ಸೀಮಿತಗೊಳಿಸಿ, ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಗಳಲ್ಲಿ ತಮ್ಮ ಮನಸಾರೆ ಜಿಲ್ಲಾ ಖನಿಜ ನಿಧಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡುತ್ತಿದ್ದರು. ಆದರೆ, ಯಾರೊಬ್ಬರಿಂದಲೂ ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶ ಮತ್ತು ಸಂಬಂಧಿಸಿದ ಗ್ರಾಮಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿ ಬಳಕೆಯಾಗುತ್ತಿದ್ದಿಲ್ಲ. ಜಿಲ್ಲಾ ಖನಿಜ ನಿಧಿ ಬಳಕೆ ಮೂಲ ಉದ್ದೇಶ ಮರೆತಿದ್ದನ್ನು ಗಮನಿಸಿದ ಕೇಂದ್ರ ಸರಕಾರ ಖನಿಜ ನಿಧಿ ಬಳಕೆಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಆದೇಶದಲ್ಲಿ ಸೂಚಿಸಿದೆ. ದೇಶದ 600 ಜಿಲ್ಲೆಗಳಲ್ಲಿ ಪ್ರಮುಖ ಹಾಗೂ ಸಣ್ಣ ಖನಿಜಗಳ ಗಣಿ ಗುತ್ತಿಗೆ ಪಡೆದ ಕಂಪನಿಗಳಿಂದ( 2015 ಮುನ್ನ) ರಾಜಧನದಲ್ಲಿನ ಶೇ.30 ರಷ್ಟು ಹಾಗೂ ಹರಾಜಿನಿಂದ ಗುತ್ತಿಗೆ ಪಡೆದ ಗಣಿ ಕಂಪನಿಗಳಿಂದ ರಾಜಧನದ ಶೇ.10 ರಷ್ಟು ಹಣ ಡಿ.ಎಂ.ಎಫ್ ಗೆ ಇಲ್ಲಿಯವರೆಗೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಜಮವಾಗುತ್ತಿತ್ತು. ಜಮಾವಾಗುತ್ತಿದ್ದ ಕೋಟ್ಯಂತರ ರೂಪಾಯಿಗಳ ಹಣ ಮಾತ್ರ ಇಲ್ಲಿಯವರೆಗೂ ಬೇಕಾಬಿಟ್ಟಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ಆದರೆ, ಅಭಿವೃದ್ಧಿಗೆ ಮೀಸಲಾಗಿದ್ದ ನಿಧಿ ರಾಜ್ಯದ ಜಿಲ್ಲೆವೊಂದರ ಕಂದಾಯ ಇಲಾಖೆಗೆ ಕಾರು ಖರೀದಿಸಲು ಬಳಕೆಯಾಗಿದ್ದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರವು ಸೂಕ್ತ ನಿರ್ಣಯಕ್ಕೆ ಮುಂದಾಗಿದೆ. ಗಣಿಗಾರಿಕೆಯಿಂದ ಹಾಳಾಗಿ ಹೋಗಿದ್ದ ಪ್ರದೇಶದ ಅಭಿವೃದ್ಧಿ ಸೇರಿದಂತೆ ಬಾಧಿತ ಗ್ರಾಮಗಳ ಶ್ರೇಯಾಭಿವೃದ್ಧಿಗೆ ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ..!?