ಜಾಗಿರ ರಾಂಪುರ | ಸಿಡಿಲು ಬಡಿದು ರೈತಮಹಿಳೆ ಸಾವು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸಿಡಿಲು ಬಡಿದು ರೈತಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಿರರಾಂಪುರ ಗ್ರಾಮ ಸೀಮಾದಲ್ಲಿ ಗುರುವಾರ ಸಂಜೆ ನಡೆದಿದೆ.

ಗ್ರಾಮದ ರೈತಮಹಿಳೆ ರತ್ನಮ್ಮ ಗಂ. ದೊಡ್ಡಪ್ಪ ಗೊರೇಬಾಳ (44) ಸಾವಿಗೀಡಾದ ದುರ್ದೈವಿ. ಸಂಜೆ ಗುಡುಗು, ಮಿಂಚು ಮಿಶ್ರಿತ ಮಳೆಯಾರಂಭವಾಗಿದ್ದು, ಜಮೀನಿನಲ್ಲಿ ಕೃಷಿ ಚೆಟುವಟಿಕೆಯಲ್ಲಿ ನಿರತಳಾಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾಳೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತ ರೈತಮಹಿಳೆ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ ಮೃತಳ ವಾರಸುದಾರ ದೊಡ್ಡಪ್ಪ ತಂದೆ ಷಣ್ಮುಖಪ್ಪ ಎಂಬುವರಿಗೆ ಪ್ರಕೃತಿ ವಿಕೋಪ ಅಡಿಯಲ್ಲಿ ₹5 ಲಕ್ಷ ಪರಿಹಾರ ಚೆಕ್ ಅನ್ನು ವಿತರಿಸಿದ್ದಾರೆ.

ಈ ವೇಳೆ ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಕಂದಾಯ ನಿರೀಕ್ಷಕ ಶರಣಯ್ಯ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.